ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾ.): ಬಸವರಾಜ ಬೊಮ್ಮಾಯಿ ರಾಜ್ಯ ಸಿಎಂ ಆಗಿ ಮುಂದಿನ ವಾರ ಒಂದು ವರ್ಷ ಪೂರೈಸಲಿದ್ದಾರೆ. ಹಾಗೆಯೇ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಬಿಜೆಪಿ ಸರ್ಕಾರದ ಸಾಧನೆಯನ್ನು ಜನರ ಮುಂದಿಡಲು ಇದೀಗ ಪಕ್ಷ ತಿರ್ಮಾನಿಸಿದೆ. ಈ ನಿಟ್ಟಿನಲ್ಲಿ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ಸಾಧನ ಸಮಾವೇಶ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆ ನಡೆಸಲಾಗಿದೆ.
ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ದೇವನಹಳ್ಳಿ ರಸ್ತೆಯ ಎಲ್ ಆಂಡ್ ಟಿ ಕಾರ್ಖಾನೆಯ ಮುಂಭಾಗ ಸಚಿವ ಸುಧಾಕರ್ ಸ್ಥಳ ಪರಿಶೀಲನೆ ನಡೆಸಿದರು. ಅಂತಿಮವಾಗಿ ಎಲ್ ಆಂಡ್ ಟಿ ಮುಂಭಾಗ ಜಾಗವನ್ನು ಕಾರ್ಯಕ್ರಮಕ್ಕೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ:ಬಿಜೆಪಿ ಸರ್ಕಾರದ ಸಾಧನೆಯ ಬಗ್ಗೆ ಪುಸ್ತಕ ಬರೆಯುತ್ತಿದ್ದೇವೆ: ಸಚಿವ ಸುಧಾಕರ್
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, "ಬಿಜೆಪಿ ಸರಕಾರ ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತ ನೀಡುತ್ತಿದೆ ಎಂಬುದನ್ನು ಸಾಬೀತು ಮಾಡಿದೆ. ಯುವ ಜನರು, ಮಹಿಳೆಯರು, ರೈತರು ಸೇರಿದಂತೆ ಪ್ರತಿ ಜನವರ್ಗಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಎಷ್ಟೇ ಆರ್ಥಿಕ ದುಸ್ಥಿತಿ ಇದ್ದರೂ ಕೋವಿಡ್ ಸಾಂಕ್ರಾಮಿಕವನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಯಶಸ್ವಿಯಾಗಿ ನಿರ್ವಹಿಸಿದೆ" ಎಂದರು.
ಕೋವಿಡ್‌ನಿಂದಾದ ಸಮಸ್ಯೆಗಳನ್ನು ನಿವಾರಿಸಿ ಇಡೀ ವ್ಯವಸ್ಥೆಯನ್ನು ಪುನಶ್ಚೇತನ ಮಾಡಲಾಗುತ್ತಿದೆ. ಪಕ್ಕದ ಶ್ರೀಲಂಕಾ ಲಾಕ್‌ಡೌನ್ ಬಳಿಕ ದಿವಾಳಿಯಾಗಿದೆ. ಅಮೆರಿಕ ನಂತರದಲ್ಲಿ ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶಗಳಲ್ಲಿ ಭಾರತ ಒಂದಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಾರಣ. ಹಾಗೆಯೇ ರಾಜ್ಯದ ಆರ್ಥಿಕ ಪ್ರಗತಿಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥ ಆಡಳಿತ ಕಾರಣ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ಸನಿಹವೇ ಇದ್ದು, ಬಿಜೆಪಿ ಸರ್ಕಾರ ಚುನಾವಣಾ ಪ್ರಚಾರ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಾಧನಾ ಸಮಾವೇಶದಿಂದ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.