ಬೆಂಗಳೂರು: ಕೊರೋನಾ ಕಾರಣಕ್ಕೆ ಕಳೆದ ಎರಡು ತಿಂಗಳಿನಿಂದ ತಣ್ಣಗಾಗಿದ್ದ ಬಿಜೆಪಿಯೊಳಗಿನ ಭಿನ್ನಮತೀಯ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಆರಂಭದಿಂದಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಸೇರಿದಂತೆ ಹಲವು ಶಾಸಕರು ಒಂದೆಡೆ ಸಭೆ ಸೇರಿ, ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಸಿಎಂ ಬಿಎಸ್ವೈಗೆ ಮತ್ತೆ ತಲೆ ನೋವು ಶುರುವಾಗಿದೆ. ರೆಬೆಲ್ ಶಾಸಕರ ಮನವೊಲಿಕೆಗೆ ಸಿಎಂ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್ವೈ ನಾನು ಯಾವುದೇ ಸಭೆ ಕರೆದಿಲ್ಲವೆಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಹಠಾತ್ ಬೆಳವಣಿಗೆಯಿಂದ ಕೆಂಡಾಮಂಡಲವಾಗಿರುವ ಪಕ್ಷದ ಹಿರಿಯ ನಾಯಕರು ಭಿನ್ನರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಭಿನ್ನಮತದ ವಿಚಾರ ನನಗೇನೂ ಗೊತ್ತೇ ಇಲ್ಲವೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಭಿನ್ನರ ಮೇಲೆ ಹದ್ದಿನ ಕಣ್ಣು!
ಸಿಎಂ ವಿರುದ್ಧ ರೆಬೆಲ್ ಶಾಸಕರು ಸಭೆ ನಡೆಸಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಶಾಸಕರ ಭವನದಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಠಡಿ ಮುಂದೆ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ತಮ್ಮ ಕೊಠಡಿಯೊಳಗಿದ್ದರೂ ಯತ್ನಾಳ್ ಬೆಳಗ್ಗೆ 10 ಗಂಟೆಯವರೆಗೂ ಹೊರಗೆ ಬಂದಿಲ್ಲ. ನಾನು ಮಾತನಾಡುವುದಿಲ್ಲ ಎಂದು ಆಪ್ತ ಸಹಾಯಕರ ಮೂಲಕ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ಮಾಧ್ಯಮಗಳಿಂದ ದೂರ ಇರಲು ಯತ್ನಾಳ್ ಬಯಸಿದ್ದಾರೆ.
'ರೆಬೆಲ್ಸ್' ಮೇಲೆ ಪಕ್ಷ ಸಿಟ್ಟು!
ಕೊರೋನಾದಿಂದಾಗಿ ರಾಜ್ಯ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಮಯದಲ್ಲಿ ಭಿನ್ನಮತ ಸರಿಯಲ್ಲ ಎಂದು ಬಿಜೆಪಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅತೃಪ್ತರ ಕಿವಿ ಹಿಂಡಿದ ಬಿಜೆಪಿ!
ಭಿನ್ನಮತದ ಮೂಲಕ ಜನರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರಾ? ಏನೇ ಮನಸ್ತಾಪ ಇದ್ದರೂ ಸಿಎಂ ಹಾಗೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ. ಬಹಿರಂಗವಾಗಿ ಮಾತನಾಡಿ ಪಕ್ಷ ಹಾಗೂ ಸರ್ಕಾರದ ಇಮೇಜ್ಗೆ ಧಕ್ಕೆ ಉಂಟು ಮಾಡಬೇಡಿ ಎಂದು ಪಕ್ಷದ ನಾಯಕರು ಕಿವಿ ಹಿಂಡಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಭಿನ್ನರು ಕೆಲ ದಿನಗಳ ಕಾಲ ಯಾವುದೇ ಸಭೆ ನಡೆಸದಿರಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.