ಬೆಂಗಳೂರು :ಕಾಂಗ್ರೆಸ್ ಪಕ್ಷ ತನ್ನ ಸರ್ಕಾರದ ಅವಧಿಯಲ್ಲೇ ಮಾಡಿದ ಘನಂದಾರಿ ಕೆಲಸವನ್ನು ಬಿಜೆಪಿ ಸರ್ಕಾರದ ಮೇಲೆ ಕಟ್ಟಲು ಯತ್ನಿಸುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆಗೊಂಡ ಪರಿಸರ ಅಧ್ಯಯನ ಪಠ್ಯಪುಸ್ತಕದ ʼಕೆಲವು ಪ್ರಸಿದ್ಧ ವ್ಯಕ್ತಿಗಳುʼ ಎಂಬ ಪಠ್ಯದಲ್ಲಿ ಮುದ್ರಿತಗೊಂಡ ಪಠ್ಯದ ಚಿತ್ರವನ್ನು ಹಂಚಿಕೊಂಡು ಇದು ಬಿಜೆಪಿ ಸರ್ಕಾರದ ಪರಿಷ್ಕರಣಾ ಸಮಿತಿ ಮಾಡಿದ್ದು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಅದೇ ಶಬ್ದ, ಅವೇ ವಾಕ್ಯ, ಅವೇ ಸಾಲು! ಯಾವುದೇ ಬದಲಾವಣೆ, ಪರಿಷ್ಕರಣೆ ಮಾಡಿಲ್ಲ. ‘ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂದು ಕುವೆಂಪು ಅವರ ಕುರಿತು ಕಾಂಗ್ರೆಸ್ ಅವಧಿಯಲ್ಲಿ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿತ್ತು. ಹಾಗಾದರೆ, ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಆಗದ ಅವಮಾನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗುತ್ತಿದೆ ಎಂಬ ಹತಾಶೆಯ ಹಿಂದಿನ ಗುಪ್ತ ಅಜೆಂಡಾವೇನು? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ನಾಟಕ ಈಗ ಬಯಲಾಗಿದೆ. ತಮ್ಮದೇ ಸರ್ಕಾರದ ಅವಧಿಯಲ್ಲಿ ತಾವೇ ನೇಮಿಸಿದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪು ಅವರನ್ನು ಶಬ್ದಗಳಲ್ಲಿ ಅವಮಾನಿಸಿತ್ತು. ಅದರ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುವ ಕಾಂಗ್ರೆಸ್ ಈಗ ರಾಷ್ಟ್ರಕವಿ ಕುವೆಂಪು ಅವರಿಗೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಬೊಬ್ಬಿಡುತ್ತಿದೆ.