ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸುವ ಚಿಂತನೆಗೆ ಮುಂದಾಗಿದ್ದು, ಆ ಭಾಗದ ಜನಪ್ರತಿನಿಧಿಗಳ ಜೊತೆ ಮಹತ್ವದ ಸಭೆ ನಡೆಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ ವಿಚಾರ ಸಂಬಂಧ ಆ ಭಾಗದ ಸಚಿವರು, ಶಾಸಕರು ಮತ್ತು ಪ್ರಮುಖರ ಜೊತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದರು.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಚಿವರಾದ ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಆರ್ ಅಶೋಕ್, ಸಂಸದರಾದ ಡಿವಿಎಸ್, ಪ್ರತಾಪ್ ಸಿಂಹ, ಪಿಸಿ ಮೋಹನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಶಾಸಕರಾದ ಪ್ರೀತಂ ಗೌಡ, ಶಾಸಕರಾದ ಸಿಪಿ ಯೋಗೀಶ್ವರ್, ವೈ ಎ ನಾರಾಯಣ ಸ್ವಾಮಿ ಮತ್ತಿತರರು ಭಾಗಿಯಾಗಿದ್ದರು.
ಸಭೆಯಲ್ಲಿ ಎಲ್ಲ ನಾಯಕರ ಅಭಿಪ್ರಾಯ ಆಲಿಸಿದ ಕಟೀಲ್, ಪಕ್ಷ ಬಲವರ್ಧನೆ ಕುರಿತು ಏನೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚಿಸಿದರು. ಸದ್ಯ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಖಾತೆ ತೆರೆದಿದ್ದು, ಅದನ್ನು ಎರಡಂಕಿಗೆ ತಲುಪಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಜಿಲ್ಲಾ ಮಟ್ಟದ ಸರ್ಕಾರದ ಸಾಧನಾ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಯಿತು.