ಬೆಂಗಳೂರು:ಸರ್ಕಾರ ಬದಲಾದಂತೆ ಹಿಂದಿನ ಸರ್ಕಾರದ ಯೋಜನೆಗಳು ಬದಲಾಗುವುದು ಸಾಮಾನ್ಯ. ಸದ್ಯ ಬಿಜೆಪಿ ಕೂಡ ಅದೇ ದಾರಿಗೆ ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಹೆಸರು ಬದಲಾಯಿಸಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕಿ ಹೆಸರಿರುವ 'ಇಂದಿರಾ ಕ್ಯಾಂಟೀನ್' ಬದಲಿಗೆ 'ಕೆಂಪೇಗೌಡ ಕ್ಯಾಂಟೀನ್ ಅಥವಾ 'ಕುಟೀರ' ಎಂಬ ನಾಮಕರಣ ಮಾಡುವ ಸಾಧ್ಯತೆ ಇದೆ. ಕ್ಯಾಂಟೀನ್ ನಿರ್ವಹಣೆಗೆ ಹಣದ ಸಮಸ್ಯೆ ಎದುರಾಗುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಅಲ್ಲದೆ, ಸರ್ಕಾರ ಕೂಡ ಪೂರ್ಣ ಪ್ರಮಾಣದ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಇದು ಬಿಬಿಎಂಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಪಾಲಿಕೆಯ ಆಡಳಿತ, ಒಳಗೊಳಗೆ ಇಂದೀರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಮಾತುಕತೆ ನಡೆಸುತ್ತಿದೆ.
ಈ ಕುರಿತು ದೂರವಾಣಿ ಮೂಲಕ ಮಾಹಿತಿ ನೀಡಿರುವ ಉಪಮೇಯರ್ ರಾಮ್ಮೋಹನ್ ರಾಜು, ಸರ್ಕಾರದ ಹಣಕಾಸು ಇಲಾಖೆ ಶೇ 25ರಷ್ಟು ಅನುದಾನ ನೀಡಲು ಒಪ್ಪಿದೆ. ಆದರೆ, ಇದರಿಂದ ಕ್ಯಾಂಟೀನ್ ನಿರ್ವಹಣೆ ಅಸಾಧ್ಯ. ಆದರಿಂದ ಉಪಚುನಾವಣೆ ಬಳಿಕ ಮರುನಾಮಕರಣ ಮಾಡಿ, ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿಎಂ ಬಿಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.