ಬೆಂಗಳೂರು: ಶ್ವೇತಪತ್ರ ಎಂದರೆ ಸತ್ಯವನ್ನು ಜನರ ಮುಂದಿಡಬೇಕು. ಆದರೆ ವೈಟ್ ಪೇಪರ್ ಅಂದರೆ ಬಿಜೆಪಿಯವರು ಸುಳ್ಳು ಹೇಳೋದು ಅಂದ್ಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಸಿನಿಮಾ ರಂಗದ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಸಮಾರಂಭವನ್ನು ಶಿವಾನಂದ ವೃತ್ತದ ಬಳಿ ಇರುವ ತಮ್ಮ ಅಧಿಕೃತ ನಿವಾಸದಲ್ಲಿ ಸಾಂಕೇತಿಕವಾಗಿ ಐದು ಜನರಿಗೆ ಸಿದ್ದರಾಮಯ್ಯ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ಹತ್ತು ಕೆಜಿ ಅಕ್ಕಿ, ಎಣ್ಣೆ, ಸಕ್ಕರೆ, ಬೆಲ್ಲ ಇರುವ ಫುಡ್ ಕಿಟ್ ವಿತರಿಸಿದರು.
ಫುಡ್ ಕಿಟ್ ಹಂಚಿಕೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮೀರ್ ನನ್ನ ಕೈಯಿಂದ ಸಿನಿಮಾ ಕಾರ್ಮಿಕರಿಗೆ ಫುಡ್ ಕಿಟ್ ಕೊಡಿಸಿದ್ದಾರೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರ ಅನೇಕ ಸಂಘಟಿತ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡುತ್ತಿಲ್ಲ. ಸಾರ್ವಜನಿಕರು, ಪತ್ರಿಕಾ ವಿತರಕರು ಕೂಡ ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಸಹಾಯ ಮಾಡಿ ಎಂದಿದ್ದೆ, ಆದರೆ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದೆ ಎಂದರು.
ಲಸಿಕೆ ಬಗ್ಗೆ ನಾವು ಯಾಕೆ ಅಪಪ್ರಚಾರ ಮಾಡೋಣ, ಲಸಿಕೆ ಇವರ ಬಳಿ ಇಲ್ಲ, ಖಾಲಿ ಅಂತ ಬೋರ್ಡ್ ಹಾಕಿರುವುದು ಯಾರು? ಲಸಿಕೆ ಉದ್ಘಾಟನೆ ಮಾಡಿದ್ದು ಯಾರು? ಬ್ರಿಟನ್ ಪ್ರಧಾನಿ ಮೊದಲಿಗೆ ಲಸಿಕೆ ತಗೊಂಡರು, ಮೋದಿ ಯಾಕೆ ಮುಂಚೆ ತೆಗೆದುಕೊಳ್ಳಲಿಲ್ಲ, ಬರೀ ಸುಳ್ಳು ಹೇಳುತ್ತಾರೆ. ಇಂದು 24 ನೇ ತಾರೀಕು ಲಸಿಕೆ ಬಂದಿದ್ಯಾ? ಇನ್ನೂ ಲಸಿಕೆಯೇ ಬಂದಿಲ್ಲ, ಪಾರದರ್ಶಕವಾಗಿರಬೇಕಲ್ಲವೆ, ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿರುವವರು ಯಾರು ಎಂದು ಹರಿಹಾಯ್ದರು.
ಡಿಸಿಗಳ ಜೊತೆ ಸಭೆಗೆ ಅವಕಾಶ ನೀಡದ ವಿಚಾರವಾಗಿ ಮಾತನಾಡಿ, ನಾನು ಪತ್ರ ಬರೆದೆ ಆದರೂ ಅವಕಾಶ ಕೊಟ್ಟಿಲ್ಲ. ಮಾಹಿತಿ ಕಲೆ ಹಾಕೋಕೆ ಸಭೆ ಕರೆದಿದ್ದು, ರಿವ್ಯೂ ಮೀಟಿಂಗ್ ಮಾಡುತ್ತೇನೆ ಎಂದಿರಲಿಲ್ಲ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ, ವಿಧಾನಸಭೆಯಲ್ಲಿ ಪ್ರಿವಿಲೇಜ್ ಮೂವ್ ಮಾಡುತ್ತೇನೆ ಎಂದರು.
ಉಮೇಶ್ ಕತ್ತಿ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಕತ್ತಿಗೆ 7 ಕೆ.ಜಿ ಅಕ್ಕಿ ಕೊಡೋಕೆ ಹೇಳಿ, ನಾನೇ ಸಿಎಂ ಆಗಿದ್ದಿದ್ದರೆ 10 ಕೆಜಿ ಕೊಡುತ್ತಿದ್ದೆ ಎಂದರು.
ದೇಶ ನೆನೆದು ಪ್ರಧಾನಿ ಮೋದಿ ಕಣ್ಣೀರು ವಿಚಾರವಾಗಿ ಪ್ರತಿಕ್ರಿಯಿಸಿ, ಅದು ನಾಟಕೀಯ ಕಣ್ಣೀರು, ಜನರನ್ನ ದಾರಿತಪ್ಪಿಸೋಕೆ ಮಾಡುತ್ತಿರುವುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.