ಕರ್ನಾಟಕ

karnataka

ETV Bharat / city

ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ದಾಳಿ ಬಿಜೆಪಿ ಸಂಘಟಿತ ಹಾಗೂ ಪೂರ್ವ ನಿಯೋಜಿತ ಕೃತ್ಯ: ಸಿಂಘ್ವಿ - ಅಭಿಷೇಕ್ ಮನು ಸಿಂಘ್ವಿ

ನ್ಯಾಯಾಂಗದ ನೈತಿಕಸ್ಥೈರ್ಯ ಕುಗ್ಗಿಸುವ, ಒತ್ತಡ ಹೇರುವ ಹಾಗೂ ಬೆದರಿಸುವ ಉದ್ದೇಶದಿಂದ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅಭಿಪ್ರಾಯ ಪಟ್ಟಿದ್ದಾರೆ.

Abhishek Singhvi
Abhishek Singhvi

By

Published : Jul 6, 2022, 10:39 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ದಾಳಿ ಕಾಕತಾಳಿಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಂಗವನ್ನು ಟ್ರೋಲ್ ಮಾಡುವ ಸಂದೇಶಗಳನ್ನು ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಎಲ್ಲೆಡೆ ಪಸರಿಸುತ್ತಿದ್ದಾರೆ. ಈ ಅಭಿಯಾನದ ಹಿಂದೆ ನ್ಯಾಯಾಂಗದ ನೈತಿಕಸ್ಥೈರ್ಯ ಕುಗ್ಗಿಸುವ, ಒತ್ತಡ ಹೇರುವ ಹಾಗೂ ಬೆದರಿಸುವ ಉದ್ದೇಶ ಅಡಗಿದೆ. ಬಿಜೆಪಿ ಸರ್ಕಾರವು ಆಡಳಿತ ವೈಫಲ್ಯ, ದೇಶದ ನಾಗರಿಕರು ಹಾಗೂ ಎಲ್ಲ ವರ್ಗದಿಂದ ಪ್ರತಿರೋಧ ಎದುರಿಸುತ್ತಿದೆ ಎಂದರು.

ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ದಾಳಿ ಬಿಜೆಪಿ ಸಂಘಟಿತ ಹಾಗೂ ಪೂರ್ವ ನಿಯೋಜಿತ ಕೃತ್ಯ

ಸುಳ್ಳು ಸುದ್ದಿ ಪ್ರಚಾರ: ಬಿಜೆಪಿ ಪರ ಪ್ರಚಾರ ಮಾಡುವ ಮಾಧ್ಯಮವೊಂದು ರಾಹುಲ್ ಗಾಂಧಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ತೇಜೋವಧೆಗೆ ಇಳಿದಿದೆ. ಬಿಜೆಪಿ ನಾಯಕರು ಪ್ರಕಟಿಸಿದ್ದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ವಾಹಿನಿ ರಾಹುಲ್ ಗಾಂಧಿ ಅವರು ಕೇರಳದ ಗಲಭೆ ವಿಚಾರವಾಗಿ ನೀಡಿದ ಹೇಳಿಕೆಯನ್ನು, ಉದಯಪುರ ಗಲಭೆ ವಿಚಾರವಾಗಿ ನೀಡಿದ ಹೇಳಿಕೆ ಎಂದು ಉದ್ದೇಶಪೂರ್ವಕವಾಗಿ ಬಿಜೆಪಿ ತಿರುಚಿದ ಸುಳ್ಳು ಸುದ್ದಿ ಪ್ರಕಟಿಸಿದೆ, ಆ ವಾಹಿನಿ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಆ ವಾಹಿನಿ ಕ್ಷಮೆಯಾಚಿಸಬೇಕಾಯಿತು ಎಂದರು.

ನ್ಯಾಯ ಪೀಠ ವಿರುದ್ಧವೇ ದಾಳಿ ಎಷ್ಟು ಸರಿ?: ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಾಗ ನ್ಯಾಯಾಲಯಕ್ಕೆ ಬಿಜೆಪಿ ಜೈಕಾರ ಹಾಕಿತ್ತು. ಆದರೆ, ಉದಯಪುರ ಗಲಭೆ ಹಿಂದೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿತು.

ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಪ್ರಾಮಾಣಿಕ ಹಾಗೂ ನೇರ ನುಡಿಯಲ್ಲಿ ಟೀಕಿಸಿದಾಗ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ ಬಿಜೆಪಿ ಮಾಡಿದ್ದಾದರೂ ಏನು? ತನ್ನ ಪಕ್ಷದ ವಕ್ತಾರೆಯನ್ನು ಖಂಡಿಸಿದ ನ್ಯಾಯ ಪೀಠ ವಿರುದ್ಧವೇ ದಾಳಿ ಮಾಡಲಾಯಿತು ಎಂದು ವಿವರಿಸಿದರು.

ಬಿಜೆಪಿಗೆ ಸವಾಲ್:​ ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳ ಬಯಸುತ್ತದೆ. ನೂರು ಕೋಟಿ ಧ್ವನಿಗಳಿರುವ ದೇಶದಲ್ಲಿ ಬಿಜೆಪಿ ಎಷ್ಟು ಧ್ವನಿಗಳನ್ನು ಅಡಗಿಸಲು ಸಾಧ್ಯ? ಸಂವಿಧಾನದ ಮೇಲೆ ಕಟ್ಟಲಾಗಿರುವ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಎಷ್ಟು ಸಂಸ್ಥೆಗಳನ್ನು ನಾಶಪಡಿಸಲಿದೆ? ಬಿಜೆಪಿಯ ದುರಾಡಳಿತ ಹಾಗೂ ವೈಫಲ್ಯ ಎದುರಿಸುತ್ತಿರುವ ದೇಶದಲ್ಲಿ ಬಿಜೆಪಿ ಎಷ್ಟು ದಿನಗಳ ಕಾಲ ಇಂತಹ ವಿಭಜನೆಯ ಅಭಿಯಾನಗಳ ಹಿಂದೆ ಅವಿತುಕೊಳ್ಳಲಿದೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಪಿಎಸ್ಐ ನೇಮಕ ಅಕ್ರಮದಲ್ಲಿ ಭಾಗಿಯಾದ ಸಚಿವರು,ನಾಯಕರ ಹೆಸರು ಮುಚ್ಚಿಡುವುದೇಕೆ?: ಡಿ.ಕೆ. ಶಿವಕುಮಾರ್

ABOUT THE AUTHOR

...view details