ಬೆಂಗಳೂರು :ಕಾಂಗ್ರೆಸ್ ನವರಿಗೆ ಮೆಕಾಲೆ ಶಿಕ್ಷಣ ನೀತಿ ಬೇಕಾಗಿದೆ. ಕಾಂಗ್ರೆಸ್ ಗುಲಾಮಗಿರಿ ಸಂಕೇತ. ಗಾಂಧಿ ಫೋಟೋ ಹಾಕಿರುವ ಕಾಂಗ್ರೆಸ್ ಇದಲ್ಲ. ಇಟಲಿ ನಾಯಕತ್ವ ಒಪ್ಪಿರುವ ಕಾಂಗ್ರೆಸ್ ಎಂದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆರೋಪಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನವರು ಹೇಳಿಕೊಳ್ಳೋಕೆ ಮಾತ್ರ ಭಾರತೀಯರು. ಆದರೆ, ಇಟಲಿ ನಾಯಕತ್ವಕ್ಕೆ ಮಣೆ ಹಾಕುತ್ತಿದ್ದಾರೆ. ನಮ್ಮ ಸಂಸ್ಕ್ರತಿ, ಕನ್ನಡಕ್ಕೆ ಒತ್ತು ನೀಡುವ ಶಿಕ್ಷಣ ನೀತಿ ಕಾಂಗ್ರೆಸ್ಗೆ ಬೇಕಿಲ್ಲ. ಹಾಗಾದರೆ, ಕಾಂಗ್ರೆಸ್ ಕನ್ನಡ ವಿರೋಧಿಯಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಲ್ಲಿ ಅಸಹಿಷ್ಟುತಾ ಭಾವನೆ ಯಾವ ಮಟ್ಟಿಗೆ ಇದೆ ಎಂದರೆ, ಲೋಕಸಭೆ ಸ್ಪೀಕರ್ ಬಂದು ಭಾಷಣ ಮಾಡುತ್ತಿರುವುದನ್ನೂ ಸಹಿಸಲಾಗುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅತಿಥೇಯ ರಾಜ್ಯ ಕರ್ನಾಟಕ. ಅತಿಥೇಯರಾಗಿ, ಅತಿಥಿಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ಈಗಿರುವುದು ಇಟಲಿಯನ್ ಕಾಂಗ್ರೆಸ್. ನೈತಿಕ ಮೌಲ್ಯವನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಸ್ಕಿಲ್ ಶಿಕ್ಷಣ ಬೇಕು ಅಂತಾ ನಾವು ಮುಂದಾದ್ರೆ, ಅವರು ಮೆಕಾಲೆ ಶಿಕ್ಷಣವೇ ಬೇಕು ಎನ್ನುತ್ತಿದ್ದಾರೆ. ಭಾರತೀಯತೆಯನ್ನು ಒಳಗೊಂಡಿರುವ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿದ್ದು, ಪ್ರಾದೇಶಿಕ ಭಾಷೆಗೆ ಮಹತ್ವ ನೀಡುತ್ತೇವೆ ಎಂದು ಹೇಳಿದರು.