ಬೆಂಗಳೂರು:ರಾಜ್ಯದಲ್ಲಿ ಈಗ ಕನ್ನಡಪರ ಹೋರಾಟ ಹಾಗೂ ಕನ್ನಡ ಪರ ಧ್ವನಿ ಭಾರಿ ಸದ್ದು ಮಾಡ್ತಿದೆ. ಈ ನಡುವೆ ಜೈನ್ ದೇವಾಲಯವೊಂದರಲ್ಲಿ ಹಿಂದಿ ಬ್ಯಾನರ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಡಿದ ಟ್ವೀಟ್ವೊಂದು ಭಾರಿ ವಾದ ಪ್ರತಿವಾದಕ್ಕೆ ಕಾರಣವಾಗಿದೆ.
ಕನ್ನಡಪರ ಹೋರಾಟಗಾರರನ್ನು ರೌಡಿಗಳಿಗೆ ಹೋಲಿಸಿ ನಿನ್ನೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ ತಮ್ಮ ಟ್ವೀಟ್ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಜೈನ ಸಾಹಿತ್ಯ ಮತ್ತು ಕರ್ನಾಟಕ ಪರಂಪರೆ ಬಗ್ಗೆ ಇನ್ನೊಂದು ಟ್ವೀಟ್ ಮಾಡಿದ್ದರು ಕೂಡಾ.
ಆದರೆ, ಅವರ ಟ್ವೀಟ್ಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ನಿನ್ನೆಯಿಂದ ಪರ ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಅಷ್ಟಕ್ಕೂ ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್ನಲ್ಲಿ ಏನಿದೆ.
ಜೈನ ದೇವಾಲಯದಲ್ಲಿ ಹಿಂದಿ ಬ್ಯಾನರ್ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈನ ಸಹೋದರರ ಮೇಲೆ ಕೆಲ ರೌಡಿಗಳು ದಾಳಿ ಮಾಡಿರುವುದು ಬಹಳ ನೋವಾಗಿದೆ. ಆದರೆ ಇವರು ಬೆಂಗಳೂರಿನಲ್ಲಿ ಉರ್ದು ಭಾಷೆ ಬಳಕೆ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿರುವ ಶಾಂತಿ ಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ನಿಜವಾದ ಕನ್ನಡಿಗರು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು
ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಮತ್ತೊಂದು ಟ್ವೀಟ್ ಮಾಡಿದ್ದ ಅವರು, ಪಂಪ, ಪೊನ್ನ ಹಾಗೂ ರನ್ನ ಈ ಮೂರು ರತ್ನತ್ರಯರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಇವರೆಲ್ಲ ಜೈನ ಸಮುದಾಯದಿಂದ ಬಂದವರು. ಕನ್ನಡ ಸಾಹಿತ್ಯದ ಆರಂಭ ಕಾಲವನ್ನ ಜೈನ ಯುಗ ಎಂದು ಕರೆಯುತ್ತಿದ್ದರು ಎಂದು ಇತಿಹಾಸದ ಪಾಠವನ್ನು ಟ್ವೀಟ್ ಮೂಲಕ ಮಾಡಿದ್ದರು.
ಹೀಗೆ ಯುವ ಸಂಸದರು ಮಾಡಿದ ಟ್ವೀಟ್ಗೆ ಅಷ್ಟೇ ವೇಗದಲ್ಲಿ ಪ್ರತಿಕ್ರಿಯೆಗಳು ಹಾಗೂ ಟೀಕೆಗಳ ಸುರಿಮಳೆಯೇ ಆಗಿದೆ. 6.9 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರೆ 25 ಸಾವಿರಕ್ಕೂ ಹೆಚ್ಚಿನ ಜನ ಲೈಕ್ ಮಾಡಿದ್ದಾರೆ.