ಬೆಂಗಳೂರು: ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಜೆಪಿಯ ಮಾಜಿ ಶಾಸಕರೊಬ್ಬರು ಆಮ್ ಆದ್ಮಿ ಪಕ್ಷ ಸೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವರು ಯಾರು ಎಂಬುದನ್ನು ಎಎಪಿ ಬಹಿರಂಗಪಡಿಸಿಲ್ಲ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ, ಬಿಜೆಪಿಯ ಮಾಜಿ ಶಾಸಕರೊಬ್ಬರು ಪಕ್ಷ ಸೇರುತ್ತಿರುವ ಕುರಿತು ತಿಳಿಸಿದೆ. ಮಧ್ಯಾಹ್ನ 12 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ನಡೆಯಲಿರುವ ಆಮ್ ಆದ್ಮಿ ಪಕ್ಷದ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ. ಎಎಪಿ ಸೇರ್ಪಡೆಯಾಗಲಿರುವ ಬಿಜೆಪಿಯ ಮಾಜಿ ಶಾಸಕ ಯಾರೆಂದು ಹೇಳುತ್ತೇವೆ. ಈಗಾಗಲೇ ಅವರ ಜೊತೆ ಮಾತುಕತೆ ನಡೆದಿದೆ. ಅವರು ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಗಲಿದೆ ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್.ವಿ.ಸದಂ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಆಂತರಿಕ ಒಳ ಜಗಳಗಳು, ಸ್ವ ಹಿತಾಸಕ್ತಿಯ ರಾಜಕಾರಣ, ಸಾಂವಿಧಾನಿಕ ಅಧಿಕಾರ ದುರ್ಬಳಕೆ, ಕುಟುಂಬ ಭ್ರಷ್ಟಾಚಾರ ಇವೆಲ್ಲವುಗಳಿಂದ ಬೇಸತ್ತಿರುವ ಬಿಜೆಪಿಯ ಕೆಲವು ಹಾಲಿ ಮತ್ತು ಮಾಜಿ ಶಾಸಕರು, ದೇಶದ ಪ್ರಸ್ತುತ ಏಕೈಕ ಆಶಾಕಿರಣವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾರದರ್ಶಕ, ಪ್ರಾಮಾಣಿಕ, ಭ್ರಷ್ಟಮುಕ್ತ ಆಡಳಿತವನ್ನು ಮೆಚ್ಚಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕರ್ನಾಟಕ ರಾಜಕೀಯದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಪರ್ಯಾಯ ರಾಜಕಾರಣದ ನಮ್ಮ ಪ್ರಯತ್ನದಲ್ಲಿ ಈ ಬೆಳವಣಿಗೆ ಸಂತಸದ ವಿಷಯವಾಗಿದೆ. ಈ ಮಹತ್ವದ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಜರುಗಲಿದೆ. ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಉಸ್ತುವಾರಿ ರೋಮಿ ಭಾಟಿ ಹಾಗೂ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.