ಬೆಂಗಳೂರು:ರಾಜ್ಯ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಹೋರಾಟದ ಹಾದಿ ಹಿಡಿದಿದ್ದಾರೆ. ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಮುಂದೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಏಕಾಂಗಿ ಧರಣಿ ನಡೆಸಿದ್ದಾರೆ.
ನಮ್ಮ ಸರ್ಕಾರವೇ ಈ ತರ ತಾರತಮ್ಯ ಮಾಡಬಾರದು. ಆದಷ್ಟು ಬೇಗ ಸಾಮಾನ್ಯ ಕ್ಷೇತ್ರ ಆಗಲಿ ಅಂತ ಅನಿಸ್ತಿದೆ. ಎಲ್ಲಾ ಉಸ್ತುವಾರಿ ಸಚಿವರು ಬರ್ತಾರೆ ಏನೂ ಮಾಡಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ. ಅದಕ್ಕಾಗಿ ಧರಣಿ ಕೂತಿದ್ದೇನೆ ಎಂದು ಶಾಸಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಹಳ ನಿರ್ಲಕ್ಷ್ಯ ಮಾಡ್ತಿದ್ದಾರೆ. ಏಕಾಏಕಿ ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿ ಮೂಡಿಗೆರೆ ಕ್ಷೇತ್ರ ಕೈಬಿಡಲಾಗಿದೆ. ಸಂಜೆಯವರೆಗೂ ನಾನು ಇಲ್ಲಿಯೇ ಕೂರುತ್ತೇನೆ. ಎನ್ಡಿಆರ್ಎಫ್ ಪಟ್ಟಿಯಲ್ಲಿ ಮೂಡಿಗೆರೆ ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಹಾರ ಕೊಡಲೇಬೇಕು.
2019ರಲ್ಲಿ ಅತಿವೃಷ್ಟಿ ಆಗಿತ್ತು. 6 ಜನ ಮನೆ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಮನೆಗಳು, ಕಾಫಿ ತೋಟ ಕೊಚ್ಚಿಕೊಂಡು ಹೋಗಿದ್ದವು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು. ಶಿವಮೊಗ್ಗ ನಗರ ಎನ್ಡಿಆರ್ಎಫ್ ವ್ಯಾಪ್ತಿಗೆ ಸೇರುತ್ತೆ. ಮೂಡಿಗೆರೆಯಲ್ಲಿ 900 ಸೆಂಟಿ ಮೀಟರ್ ಮಳೆಯಾಗಿದೆ. ನಾನು 2018ರಲ್ಲಿ ಶಾಸಕನಾದಾಗ ಕುಮಾರಸ್ವಾಮಿ ಸಿಎಂ ಆಗಿದ್ರು. ಕುಮಾರಸ್ವಾಮಿ ಸಿಎಂ ಆದಾಗ ನಮಗೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ನಮ್ಮದೇ ಸರ್ಕಾರ ಇದ್ದರೂ ನಿರ್ಲಕ್ಷ್ಯ ಮಾಡಲಾಗ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.