ಬೆಂಗಳೂರು:ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ನಡೆಸದಿರುವ ಭ್ರಷ್ಟಾಚಾರವಿಲ್ಲ. ಮೇವು ತಿಂದವರು ಜೈಲಿನಲ್ಲಿದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗುತ್ತಾರೆ ಎಂದು ಸಿ.ಟಿ.ರವಿ ಭವಿಷ್ಯ ನುಡಿದರು.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ, ಕಾಂಗ್ರೆಸ್ನವರು ಸಂವಿಧಾನಕ್ಕಿಂತ ಮೇಲ್ಪಟ್ಟವರಾ? ಕಾಂಗ್ರೆಸ್ನವರಿಗೆ ಭಯ ಯಾಕೆ? ಹಗರಣಗಳ ಸರದಾರ ಕಾಂಗ್ರೆಸ್ ಪಕ್ಷ. ಕಾಲಿನಿಂದ ತಲೆಯವರೆಗೂ ಹಗರಣ ಹೊದ್ದುಕೊಂಡಿರುವುದು ಕಾಂಗ್ರೆಸ್ ಎಂದು ಟೀಕಿಸಿದರು.
ಇಂಡಿಯನ್ ಆಯಿಲ್ ಸ್ಕ್ಯಾಮ್, 2ಜಿ ಸ್ಪೆಕ್ಟ್ರಂ, ಆಗಸ್ಟಾ ವೆಸ್ಟ್ಲ್ಯಾಂಡ್, ಕೆಜಿ ಬೇಸಿನ್ ಹಗರಣವನ್ನು ಕಾಂಗ್ರೆಸ್ ಮಾಡಿದೆ. ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರಿಗಳೇ ಬೆಂಬಲ ಕೊಡುತ್ತಿದ್ದಾರೆ. ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಕಾಂಗ್ರೆಸ್ನವರು ಬೀದಿಗಿಳಿದಿದ್ದಾರೆ. ಗಾಂಧಿ ಕುಟುಂಬದ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ. ದೇಶಕ್ಕಿಂತ ನಾವು ದೊಡ್ಡವರು ಅಂತಾ ಅವರು ತಿಳಿದುಕೊಂಡಿರುವುದು ದುರಂತ ಎಂದರು.