ಬೆಂಗಳೂರು: ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಘೋಷಣೆಯಾಗಲಿದೆ. ಈ ಚುನಾವಣೆಗೆ ಸಿದ್ಧತೆ ಕುರಿತು ಬಿಜೆಪಿ ಪಕ್ಷ ಪೂರ್ವಭಾವಿಯಾಗಿ ಬೆಂಗಳೂರು ಸಚಿವರು ಮತ್ತು ಶಾಸಕರ ಮಹತ್ವದ ಸಭೆ ನಡೆಸಲಾಯಿತು.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಸಭೆಗೆ ಬೆಂಗಳೂರಿನ ಬಹುತೇಕ ಸಚಿವರು ಸಂಸದರು, ಶಾಸಕರು ಹಾಜರಾಗಿದ್ದರು. ಸಚಿವ ವಿ.ಸೋಮಣ್ಣ, ಶಾಸಕರಾದ ಸುರೇಶ್ ಕುಮಾರ್, ರಘು ಗೈರಾಗಿದ್ದರು.
ಕಳೆದ ಬಾರಿ 198 ವಾರ್ಡ್ಗಳಲ್ಲಿ 100 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯಲು ವಿಫಲವಾಗಿತ್ತು. ಅಗತ್ಯ ಬಹುಮತಕ್ಕೆ ಪಕ್ಷೇತರ ಸದಸ್ಯರನ್ನು ಸೆಳೆಯುವಲ್ಲಿ ಎಡವಿತ್ತು. ನಂತರ ಕಡೆಯ ಅವಧಿಯ ಒಂದು ವರ್ಷಕ್ಕೆ ಜೆಡಿಎಸ್ ಸಖ್ಯದೊಂದಿಗೆ ಅಧಿಕಾರದ ಗದ್ದುಗೆ ಏರುವ ಮೂಲಕ ಪಕ್ಷ ತೃಪ್ತಿಪಟ್ಟುಕೊಂಡಿತ್ತು. ಹಾಗಾಗಿ ಈ ಬಾರಿ ಶತಾಯ ಗತಾಯ ಬಿಬಿಎಂಪಿ ಗದ್ದುಗೆ ಪಡೆಯಲು ಸರ್ಕಸ್ ನಡೆಸುತ್ತಿದೆ.
ನಂಬರ್ ಗೇಮ್ನಲ್ಲಿ ಯಾವ ಕಾರಣಕ್ಕೂ ಹಿಂದುಳಿಯಬಾರದು, ಅಗತ್ಯ ಸಂಖ್ಯಾಬಲ ಪಡೆಯಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಲಾಯಿತು. ಪಾಲಿಕೆ ಚುನಾವಣೆಯಲ್ಲಿ ಬೆಂಗಳೂರು ಸಚಿವರು, ಶಾಸಕರ ಪಾತ್ರ ಮಹತ್ವದ್ದಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರ ನೀಡಿದ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ಬಿಜೆಪಿ ಪರ ಜನರ ಒಲವು ಮೂಡುವಂತೆ ಮಾಡಬೇಕು ಎಂದು ಶಾಸಕರು, ಸಚಿವರಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಇದನ್ನೂಓದಿ: ಪರಿಷತ್ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದೇವೆ, ಗೆಲ್ಲುವ ನಿರ್ಣಯವಾಗಿದೆ: ಕ್ಯಾ.ಗಣೇಶ್ ಕಾರ್ಣಿಕ್