ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ತಂತ್ರಗಾರಿಕೆ ರೂಪಿಸಲು ಮುಂದಾಗಿರುವ ರಾಜ್ಯ ಬಿಜೆಪಿ, ಚುನಾವಣಾ ಉಸ್ತುವಾರಿಗಳ ಮಹತ್ವದ ಸಭೆ ನಡೆಸುತ್ತಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ 15 ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳು ಪಾಲ್ಗೊಂಡಿದ್ದಾರೆ. ಉಪ ಚುನಾವಣಾ ಕಾರ್ಯತಂತ್ರ ರೂಪಿಸುವ ಸಂಬಂಧ ಮಹತ್ವದ ಸಮಾಲೋಚನೆ ನಡೆಸುತ್ತಿದ್ದು, ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಯಾವ ರೀತಿ ಪ್ರಚಾರ ಕಾರ್ಯ ನಡೆಸಬೇಕು. ಯಾವ ರೀತಿ ಮತದಾರರನ್ನು ಸೆಳೆಯಬೇಕು. ಪ್ರತಿಸ್ಪರ್ಧಿಗಳ ವಿರುದ್ಧ ಯಾವ ರೀತಿ ಪ್ರತಿತಂತ್ರ ರೂಪಿಸಬೇಕು ಎನ್ನುವ ಕುರಿತು ಚರ್ಚಿಸಲಾಗುತ್ತಿದೆ.