ಬೆಂಗಳೂರು:ತವರು ಜಿಲ್ಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಮುಖಭಂಗಕ್ಕೊಳಗಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ನಿಲ್ಲುತ್ತಿದ್ದು, ಸಾಮೂಹಿಕ ನಾಯಕತ್ವ, ಸಿಎಂ ನೇತೃತ್ವದ ಮಂತ್ರ ಜಪಿಸುತ್ತಿದ್ದಾರೆ. ಆ ಮೂಲಕ ಸಿಎಂ ನಾಯಕತ್ವ ಅಬಾಧಿತ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸವಾಲಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಡೆಗೂ ಸೋಲಿನ ರುಚಿ ಕಂಡಿದ್ದು, ನಾಯಕತ್ವ ಕುರಿತು ಚರ್ಚೆ ಹುಟ್ಟುವಂತೆ ಮಾಡಿದೆ. ಆದರೆ ಬೊಮ್ಮಾಯಿ ಪರ ಮಾಜಿ ಸಿಎಂ ಯಡಿಯೂರಪ್ಪ ಬ್ಯಾಟಿಂಗ್ ಮಾಡುವ ಮೂಲಕ ಶಿಷ್ಯನ ಪರ ವಕಾಲತ್ತು ವಹಿಸಿದ್ದಾರೆ. ಯಡಿಯೂರಪ್ಪ ಬೆನ್ನಲ್ಲೇ ಅವರ ನಿಷ್ಟರೂ ಕೂಡ ಬೊಮ್ಮಾಯಿ ಪರ ನಿಲುವ ವ್ಯಕ್ತಪಡಿಸಿ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸುತ್ತಿದ್ದಾರೆ.
ಸೋಲಿಗೆ ಮುಖ್ಯಮಂತ್ರಿ ಒಬ್ಬರನ್ನೇ ಹೊಣೆ ಮಾಡಲು ಸಾಧ್ಯವಿಲ್ಲ, ಸೋಲಾಗಲಿ, ಗೆಲುವಾಗಲಿ ಎಲ್ಲರಿಗೂ ಸಮಾನ ಹೊಣೆಗಾರಿಕೆ ಇರಲಿದೆ. ಹಾಗಾಗಿ, ಹಾನಗಲ್ ಸೋಲನ್ನು ಯಾರೋ ಒಬ್ಬರ ತಲೆಗೆ ಕಟ್ಟುವುದನ್ನು ನಾನು ಒಪ್ಪುವುದಿಲ್ಲ ಎಂದು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮಾಜಿ ಸಿಎಂ ಬಿಎಸ್‌ವೈ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು, ಸಿಎಂ ಬೆಂಬಲಕ್ಕೆ ಯಡಿಯೂರಪ್ಪ ನಿಲ್ಲುತ್ತಿದ್ದಂತೆ ಬಿಎಸ್‌ವೈ ಆಪ್ತರು ಕೂಡ ಅಖಾಡಕ್ಕಿಳಿದಿದ್ದಾರೆ. ಹಿರಿಯ ಸಚಿವ ವಿ.ಸೋಮಣ್ಣ ಮತ್ತು ಸಿ.ಸಿ.ಪಾಟೀಲ್ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬೊಮ್ಮಾಯಿ ಪರ ಮಾತನಾಡಿದ್ದಾರೆ. ನಮ್ಮ ವೋಟುಗಳು ಕೈತಪ್ಪಿಲ್ಲ. ನಮ್ಮ ಮತಗಳು ನಮ್ಮ ಅಭ್ಯರ್ಥಿಗೆ ಬಂದಿವೆ ಎಂದು ಸೋಲನ್ನೂ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಅಮಿತ್ ಶಾ ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದು, ಅದರಂತೆ ಸಿಎಂ ನೇತೃತ್ವದಲ್ಲೇ ನಾವು 2023ರ ಸಾರ್ವತ್ರಿಕ ಚುನಾವಣೆಗೆ ಹೋಗಲಿದ್ದೇವೆ ಎಂದಿದ್ದಾರೆ.