ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ಶುಭಾಶಯ ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ರಾಜಭವನದಲ್ಲಿ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿ, ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಲಿ ಎಂದು ಹಾರೈಸಿದ್ದಾರೆ.
ಅಭಿವೃದ್ಧಿ ಪರ್ವ ಮುಂದುವರೆಯಲಿದೆ: ಕುಮಾರ ಬಂಗಾರಪ್ಪ
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಾಶಯಗಳು. ನಮ್ಮ ಭಾಗದ ಮುಖಂಡರಾಗಿ ಜನ ಸಂಪರ್ಕದಲ್ಲಿದ್ದ ಹಿರಿಯ ನಾಯಕರಿಗೆ ಇಂದು ಮುಖ್ಯಮಂತ್ರಿಯಾಗುವ ಅವಕಾಶ ಲಭಿಸಿದೆ.
ಬಿ.ಎಸ್ ಯಡಿಯೂರಪ್ಪನವರು ಕಳೆದ ಎರಡು ವರ್ಷದಿಂದ ರಾಜ್ಯವನ್ನು ಅಭಿವೃದ್ಧಿಯ ಮಾರ್ಗದಲ್ಲಿ ಕೊಂಡೊಯ್ದಿದ್ದರು. ಅದನ್ನು ಮುಂದೆ ಕೊಂಡೊಯ್ಯುವ ಜವಾಬ್ದಾರಿ ಇವರ ಮೇಲಿದೆ. ರಾಜ್ಯದ ಜನರು ಬಸವರಾಜ ಬೊಮ್ಮಾಯಿ ಮೇಲೆ ಸಾಕಷ್ಟು ಆಶಯ ಇಟ್ಟುಕೊಂಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರಂತರವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಲಿದೆ ಎಂದರು.
ಇದೇ ವೇಳೆ ನಾನು ಸಹಜವಾಗಿಯೇ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗುವ ನಿರೀಕ್ಷೆ ಇದೆ. ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರು ಅವಕಾಶ ನೀಡಿದರೆ ಸಚಿವನಾಗಲು ಇಚ್ಚಿಸುತ್ತೇನೆ. ಖಾತೆಯ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ಕಾಲಾವಕಾಶ ಇದೆ ಎಂದರು.
ಶಾಸಕ ರಾಜಕುಮಾರ್ ಮಾತನಾಡಿ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಲಿದ್ದಾರೆ. ಎರಡು ಮೂರು ದಿನಗಳಲ್ಲಿ ಉತ್ತಮವಾದ ಸಚಿವ ಸಂಪುಟ ರಚಿಸಿ ರಾಜ್ಯದ ಜನರು ಮೆಚ್ಚುವ ರೀತಿ ಸರ್ಕಾರ ನೀಡಲಿದ್ದಾರೆ. ಇದು ಕೇವಲ ಬಿಜೆಪಿ ಶಾಸಕರ ಆಯ್ಕೆ ಮಾತ್ರವಲ್ಲ, ರಾಜ್ಯದ ಆರೂವರೆ ಕೋಟಿ ಜನರ ಆಯ್ಕೆಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಹಾಗೂ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದರು.
ಹೆಮ್ಮ ಮತ್ತು ಸಂತಸ ತಂದಿದೆ: ಸುರೇಶ್ ಕುಮಾರ್
ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಆಯ್ಕೆ ನಮಗೆ ಹೆಮ್ಮೆ ಹಾಗೂ ಸಂತಸ ತಂದಿದೆ. ಬಸವರಾಜ್ ಬೊಮ್ಮಾಯಿ ನಮ್ಮ ಮಧ್ಯೆ ಇರುವ ಅನುಭವಿ ನೇತಾರರಲ್ಲಿ ಒಬ್ಬರು. ಅವರ ನಾಯಕತ್ವ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಾಯವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.