ಬೆಂಗಳೂರು:ಅನಗತ್ಯವಾಗಿ ಶಾಸಕರು ದೆಹಲಿಗೆ ಬರಬಾರದು ಎಂದು ಹೈಕಮಾಂಡ್ ಪರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೀಡಿದ್ದ ಕಟ್ಟು ನಿಟ್ಟಿನ ಸೂಚನೆಗೆ ಬಿಜೆಪಿ ನಾಯಕರು ಡೋಂಟ್ ಕೇರ್ ಎಂದಿದ್ದು, ದೆಹಲಿಗೆ ತೆರಳುವ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ.
ಜೂನ್ 16 ರಿಂದ18 ರವರೆಗೆ ಮೂರು ದಿನಗಳ ಕಾಲ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಮಾಡಿದ್ದರು. ಈ ವೇಳೆ ಶಾಸಕರು, ಸಂಸದರು, ಸಚಿವರ ಜೊತೆ ಸಭೆ ನಡೆಸಿದ್ದರು, ಅಸಮಾಧಾನದ ಕುರಿತು ಮಾತುಕತೆ ನಡೆಸಿದ್ದರು. ಶಾಸಕರು ದೆಹಲಿಗೆ ಹೋಗಿ ಬರುತ್ತಿದ್ದಂತೆ ನಾಯಕತ್ವ ಬದಲಾವಣೆ ವದಂತಿ ಹರಿದಾಡುತ್ತದೆ. ಹಾಗಾಗಿ ಅನಗತ್ಯವಾಗಿ ಶಾಸಕರು ದೆಹಲಿಗೆ ಬರುವುದಕ್ಕೆ ಕಡಿವಾಣ ಹಾಕಬೇಕು ಎಂದು ರಾಜ್ಯ ನಾಯಕರು ಮನವಿ ಮಾಡಿದ್ದರು.
ಇದಕ್ಕೆ ಪೂರಕವಾಗಿ ನಿರ್ಧಾರ ಪ್ರಕಟಿಸಿದ್ದ ಅರುಣ್ ಸಿಂಗ್ ಇನ್ಮುಂದೆ ದೆಹಲಿಗೆ ಬಂದು ಅನುಮತಿ ಕೋರಿದರೆ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಗುವುದಿಲ್ಲ, ಪೂರ್ವಾನುಮತಿ ಪಡೆದುಕೊಂಡು ಬಂದರಷ್ಟೇ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಫರ್ಮಾನು ಹೊರಡಿಸಿ ಯಾರೂ ದೆಹಲಿಗೆ ಬರಬಾರದು ಕ್ಷೇತ್ರದಲ್ಲಿದ್ದು ಕೆಲಸ ಮಾಡಿ ಎಂದು ತಾಕೀತು ಮಾಡಿದ್ದರು.
ಅರುಣ್ ಸಿಂಗ್ ವಾರ್ನಿಂಗ್ ಕಡೆಗಣಿಸಿದ ನಾಯಕರು
ಹೈಕಮಾಂಡ್ ಪರವಾಗಿ ಅರುಣ್ ಸಿಂಗ್ ನೀಡಿದ್ದ ಆದೇಶವನ್ನು ರಾಜ್ಯದ ನಾಯಕರು ಕಡೆಗಣಿಸಿರುವುದು ಸ್ಪಷ್ಟವಾಗಿದೆ. ಅರುಣ್ ಸಿಂಗ್ ದೆಹಲಿಗೆ ವಾಪಸ್ಸಾದ ಬೆನ್ನಲ್ಲೇ ರಾಜ್ಯದ ನಾಯಕರ ದೆಹಲಿ ಪ್ರವಾಸ ಮತ್ತೆ ಆರಂಭಗೊಂಡಿದೆ. ದೆಹಲಿ ನಾಯಕರ ಭೇಟಿಯನ್ನೂ ಮಾಡುತ್ತಿದ್ದಾರೆ.
ಜೂನ್ 25 ರಂದು ಸಿಎಂ ಪುತ್ರ ಹಾಗು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ಗೆ ಅರುಣ್ ಸಿಂಗ್ ವರದಿ ನೀಡಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಈ ವೇಳೆ, ಸರ್ಕಾರದಲ್ಲಿ ಹಸ್ತಕ್ಷೇಪ ಆರೋಪ ಬಾರದಂತೆ ಎಚ್ಚರಿಕೆ ವಹಿಸಿ ಇಲ್ಲದೇ ಇದ್ದಲ್ಲಿ ಯಡಿಯೂರಪ್ಪ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎನ್ನುವ ಬುದ್ಧಿ ಮಾತು ಹೇಳಿ ಕಳಿಸಿದ್ದರು.
ವಿಜಯೇಂದ್ರ ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ನಾಯಕತ್ವ ಬದಲಾವಣೆ ಪರ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವ ಸಿ.ಪಿ ಯೋಗೇಶ್ವರ್ ಕೂಡ ದೆಹಲಿಗೆ ಪ್ರಯಾಣಿಸಿದ್ದು, ಜೂನ್ 26 ರಂದು ಹೈಕಮಾಂಡ್ ನಾಯಕರ ಭೇಟಿ ಕಸರತ್ತು ನಡೆಸಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಮತ್ತೊಮ್ಮೆ ದೂರು ನೀಡಲು ಹೋಗಿದ್ದರು ಎನ್ನಲಾಗಿದೆ. ಕರ್ನಾಟಕ ಭವನದ ಬದಲು ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರಿಂದ ಈ ಭೇಟಿ ರಾಜಕೀಯ ಕಾರಣದಿಂದ ಕೂಡಿದೆ ಎನ್ನಲಾಗಿದೆ.
ಯೋಗೇಶ್ವರ್ ದೆಹಲಿಯಿಂದ ವಾಪಸ್ ಆಗುತ್ತಿದಗದಂತೆ ರೆಬೆಲ್ ಶಾಸಕ ಅರವಿಂದ ಬೆಲ್ಲದ್ ದೆಹಲಿಯತ್ತ ಮುಖ ಮಾಡಿದ್ದಾರೆ. ನಿನ್ನೆ ಹೈದರಾಬಾದ್ಗೆ ತೆರಳಿದ್ದ ಬೆಲ್ಲದ್, ಅಲ್ಲಿಂದ ನವದೆಹಲಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ರಾಜ್ಯ ಭೇಟಿ ವೇಳೆ ಟೆಲಿಫೋನ್ ಕದ್ದಾಲಿಕೆ ಬಾಂಬ್ ಸಿಡಿಸಿ ಉಸ್ತುವಾರಿ ಭೇಟಿ ಮಾಡಲು ವಿಫಲರಾಗಿದ್ದ ಬೆಲ್ಲದ್ ಇದೀಗ ದೂರು ಹೊತ್ತು ದೆಹಲಿಗೆ ತೆರಳಿದ್ದಾರೆ. ತಮ್ಮ ಅಭಿಪ್ರಾಯವನ್ನು ಅಲ್ಲಿ ಮಂಡಿಸಲಿದ್ದಾರೆ. ಹೈಕಮಾಂಡ್ ನಾಯಕರ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ನಾಯಕತ್ವ ಬದಲಾವಣೆ ವದಂತಿಯ ಮೂಲವಾದ ಶಾಸಕರ ದೆಹಲಿ ಪ್ರವಾಸಕ್ಕೆ ಬ್ರೇಕ್ ಹಾಕುವ ಹೈಕಮಾಂಡ್ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ದೆಹಲಿಗೆ ಬರಬೇಡಿ ಎನ್ನುವ ಹೈಕಮಾಂಡ್ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ರಾಜ್ಯ ನಾಯಕರು ದೆಹಲಿ ಭೇಟಿ ಮುಂದುವರೆಸಿದ್ದಾರೆ.