ಕರ್ನಾಟಕ

karnataka

By

Published : Mar 19, 2020, 4:35 PM IST

ETV Bharat / city

ಸದನದಲ್ಲಿ ಇಬ್ರಾಹಿಂ ಹೇಳಿಕೆಗೆ ಕೆರಳಿ ಕೆಂಡವಾದ ಬಿಜೆಪಿ ನಾಯಕರು

ಇಂದು ಸದನದಲ್ಲಿ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ನೀಡಿದ ಹೇಳಿಕೆಯೊಂದನ್ನ ಖಂಡಿಸಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿಗೌಡ ಸದನದಿಂದ ಹೊರನಡೆದಿದ್ದು, ನಂತರ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದರು.

BJP leaders angry over Ibrahim's statement
ಸದನದಲ್ಲಿ ಇಬ್ರಾಹಿಂ ಹೇಳಿಕೆಗೆ ಕೆರಳಿ ಕೆಂಡವಾದ ಬಿಜೆಪಿ ನಾಯಕರು

ಬೆಂಗಳೂರು:ಇಂದು ಸದನದಲ್ಲಿ ಕಾಂಗ್ರೆಸ್​​ನ ವಿಧಾನ ಪರಿಷತ್​ ಸದಸ್ಯ ಸಿ.ಎಂ. ಇಬ್ರಾಹಿಂ ನೀಡಿರುವ ಹೇಳಿಕೆಯೊಂದನ್ನ ಖಂಡಿಸಿ ಬಿಜೆಪಿಯ ಸದಸ್ಯೆ ತೇಜಸ್ವಿನಿಗೌಡ ಸದನದಿಂದ ಹೊರನಡೆದರು. ನಂತರ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದರು.

ವಿಧಾನ ಪರಿಷತ್ ಕಲಾಪದಲ್ಲಿ ಸಂವಿಧಾನ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿ.ಎಂ. ಇಬ್ರಾಹಿಂ, ಸಿಎಎ ಬಗ್ಗೆ ಪ್ರಸ್ತಾಪ ಮಾಡಿದರು. ಸಿಎಎಯಲ್ಲಿ ಐದು ಧರ್ಮಿಯರನ್ನು ಸೇರಿಸಿದ್ದಾರೆ. ಆದರೆ, ಮುಸಲ್ಮಾನರನ್ನ ಕೈಬಿಟ್ಟಿದ್ದಾರೆ. ಕಾರಣ ಕೇಳಿದ್ರೆ, ನೆರೆ ರಾಷ್ಟ್ರದ ಅಲ್ಪಸಂಖ್ಯಾತರನ್ನು ಮಾತ್ರ ಸೇರಿಸಿದ್ದೇವೆ ಎಂದು ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಭಾರತದ ಪೌರತ್ವ ಬೇಕು ಎನ್ನುವವರು ಇಲ್ಲಿಯೇ ಇರಬೇಕಿತ್ತು. ಪಾಕಿಸ್ತಾನ, ಬಾಂಗ್ಲಾ ಮುಸಲ್ಮಾನರಿಗೆ ಪೌರತ್ವ ಕೊಡಿ ಎಂದು ಓಪನ್ ಸ್ಟೇಟ್​​​ಮೆಂಟ್ ಕೊಡಿ ಎಂದು ಬಿಜೆಪಿಯ ರವಿಕುಮಾರ್ ಮತ್ತು ತೇಜಸ್ವಿನಿಗೌಡ ತಿರುಗೇಟು ನೀಡಿದರು.

ನಂತರ ಮಾತು ಮುಂದುವರೆಸಿದ ಇಬ್ರಾಹಿಂ, ಚುನಾವಣಾ ವ್ಯವಸ್ಥೆ ಕ್ಷೀಣಿಸಿದೆ. ಜಗತ್ತಿನ ಯಾವುದೇ ದೇಶವೂ ಒಪ್ಪದ ಇವಿಎಂ ಮೇಲೆ ಯಾಕೆ ಅಷ್ಟು‌ ಮೋಹ. ಎಲ್ಲೋ‌ ಒಂದು ಕಡೆ ಗೋಲ್​ಮಾಲ್ ಇದೆ ಎನ್ನುತ್ತಿದ್ದಂತೆ ಇದು ನೀವೇ ತಂದಿದ್ದು ಎಂದು ಬಿಜೆಪಿ‌ ಸದಸ್ಯರು ಕಾಲೆಳೆದರು. ನಾವಿದ್ದಾಗ ಗೋಲ್​ಮಾಲ್ ಇರಲಿಲ್ಲ, ಈಗ ಆಗುತ್ತಿದೆ ಎಂದು ಬಿಜೆಪಿ ಸದಸ್ಯರಿಗೆ ಇಬ್ರಾಹಿಂ ತಿರುಗೇಟು ನೀಡಿದ್ರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪ ನಡೆಯಿತು. ನಂತರ ಇವಿಎಂ ನಾವೇ ತಂದಿದ್ದು, ಒಪ್ಪುತ್ತೇವೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಅವಕಾಶದಂತೆ ನೀವು ಯಾಕೆ ಬದಲಾಯಿಸಲ್ಲ. ಇವಿಎಂ ಮೇಲೆ ನನಗೆ ಅನುಮಾನ ಇದೆ. ಇದು ರಾಮರಾಜ್ಯ. ಅಂದು ರಾಮನು ಸೀತೆಯ ಮೇಲೆ ಅನುಮಾನ ಬಂದಾಗ ಸ್ವತಃ ಪತ್ನಿಯನ್ನ ತ್ಯಾಗ ಮಾಡಿದ್ದ. ಹಾಗಿರುವಾಗ ನೀವು ಇವಿಎಂ ತ್ಯಾಗ ಮಾಡಲ್ಲವೇ ಎಂದು ಬಿಜೆಪಿಯ ಕಾಲೆಳೆದರು.

ನಂತರ ತಮ್ಮ ಎಂದಿನ‌ ಹಾಸ್ಯ ಶೈಲಿಯಲ್ಲಿ‌ ಕಥೆಯೊಂದರ ಸನ್ನಿವೇಶ ಉಲ್ಲೇಖಿಸುತ್ತಾ ಈಗ ಎಲ್ಲಿಯೇ ಕೆಲಸ ಕೇಳಲು ಹೋದರೆ ಅನುಭವ ಕೇಳುತ್ತಾರೆ. ಅದಕ್ಕೆ ನಾ‌ನು ನಿನ್ನ ಮಗಳನ್ನ ಕೊಡುವಾಗ ಅಳಿಯನ ಅನುಭವ ಕೇಳಿದ್ದಿರಾ ಎಂದೆ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೇರಿದಂತೆ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗೆ ಮುನ್ನ ಅನುಭವ ಕೇಳುತ್ತೀರಾಲ್ಲ ಇದು ಮಹಿಳೆಯರಿಗೆ ಮಾಡುತ್ತಿರೋ ಅಪಮಾನ ಎಂದು ಇಬ್ರಾಹಿಂ ಹೇಳಿಕೆಯನ್ನು ಖಂಡಿಸಿದರು. ಇಬ್ರಾಹಿಂ ಮಾತಿಗೆ ಕೆರಳಿ ಕೆಂಡವಾದ ತೇಜಸ್ವಿನಿ ಗೌಡ, ಇಬ್ರಾಹಿಂ ಅವರ ಮಾತಿನಿಂದ ನಮಗೆ ಬೇಸರವಾಗಿದೆ. ಬೇಕಾದಂತೆ ಮಾತನಾಡೋದಾದ್ರೆ ನಾನು ಹೊರ ಹೋಗುತ್ತೇನೆ, ಇದು ಸಂತೆಯಲ್ಲ. ಮಹಿಳೆಯರಿಗೆ ಅವಮಾನ ಮಾಡುತ್ತೀದ್ದೀರ ಎನ್ನುತ್ತಾ ಸದನದಿಂದ ಹೊರನಡೆದ್ರು.

ನಂತರ ಬಿಜೆಪಿ‌ ಸದಸ್ಯರು ಇಬ್ರಾಹಿಂ ವಿರುದ್ಧ ಮುಗಿಬಿದ್ದರು. ನಿಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಾಗ ಅನುಭವ ಕೇಳಿದ್ರಾ ಎಂದು ಇಬ್ರಾಹಿಂರನ್ನು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸಿಎಂ ಇಬ್ರಾಹಿಂ ಮಾತನ್ನ ಕಡಿತದಿಂದ ತೆಗೆಯಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ಸದನದಲ್ಲಿ ಹೇಗೆ ಮಾತನಾಡಬೇಕು ಅಂತ ನಿಯಮ ಇದೆ. ಅದು ಎಲ್ಲರಿಗೂ‌ ಗೊತ್ತಿದೆ. ಕೆಲವೊಮ್ಮೆ ಮಾತ‌ನಾಡುವಾಗ ಹೆಚ್ಚು ಕಡಿಮೆ ಆಗುವುದು ಸಹಜ. ಈಗ ಇಬ್ರಾಹಿಂ ತಪ್ಪಾಗಿ ಹೇಳಿದ್ದನ್ನ ವಿತ್​​ಡ್ರಾ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಹೊರಟ್ಟಿ ಸಲಹೆಯಂತೆ ಸಿಎಂ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ರು. ಇಬ್ರಾಹಿಂ ಹೇಳಿಕೆ ಹಿಂಪಡೆಯುತ್ತಿದ್ದಂತೆ ತೇಜಸ್ವಿನಿಗೌಡ ಮತ್ತೆ ಕಲಾಪಕ್ಕೆ ಹಾಜರಾದರು.

ABOUT THE AUTHOR

...view details