ಬೆಂಗಳೂರು :ಪಂಚರಾಜ್ಯಗಳ ಚುನಾವಣೆಯಲ್ಲಿ ಮತದಾರರು ಆಯಾ ರಾಜ್ಯಗಳ ಸ್ಥಿತಿ ಆಧರಿಸಿ ಉತ್ತಮ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸಚಿವರಾದ ಭೈರತಿ ಬಸವರಾಜು, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಅರವಿಂದ ಬೆಲ್ಲದ್, ರಾಜೂಗೌಡ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐದು ರಾಜ್ಯಗಳ ಪೈಕಿ ಬಿಜೆಪಿ 4 ಕಡೆ ಅಧಿಕಾರದಲ್ಲಿತ್ತು.
ಅಧಿಕಾರದಲ್ಲಿದ್ದ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಎದುರಾಗುತ್ತೆ ಅಂತಾ ಚರ್ಚೆ ನಡೆದಿತ್ತು. ಆದರೆ, ಜನ ಆಡಳಿತದ ಪರ ಇರುವ, ಜನ ಸ್ನೇಹಿ ರಾಜಕಾರಣಕ್ಕೆ, ರಾಷ್ಟ್ರದ ಹಿತಕ್ಕೆ ಮತ ಹಾಕಿದ್ದಾರೆ ಎಂದರು.
ಜಾತಿ ಆಧರಿತ ರಾಜಕೀಯ ಹಿಂದೆ ಯಶ ಕಾಣುತ್ತಿತ್ತು. ಯಾದವರು- ಮುಸ್ಲಿಂ ಸೂತ್ರದ ಮೂಲಕ ಯುಪಿ, ಬಿಹಾರಗಳಲ್ಲಿ 2 ದಶಕಗಳ ಕಾಲ ಅಧಿಕಾರ ಹಿಡಿದಿದ್ದರು. ಈಗ ಪರಿವಾರ, ಜಾತಿ ರಾಜಕಾರಣ ನಡೆಯಲ್ಲ. ಈ ಚುನಾವಣೆಯಲ್ಲಿ ಅಂಥವರಿಗೆ ಮುಖಭಂಗವಾಗಿದೆ.
ಯುಪಿಯಲ್ಲಿ ಗೆದ್ದಿರೋದು ಅಭಿವೃದ್ಧಿ ಪರ ಚಿಂತನೆ, ಗರೀಬಿ ಕಲ್ಯಾಣ, ಮೋದಿ-ಯೋಗಿ ಮೇಲೆ ಜನರು ಇಟ್ಟ ನಂಬಿಕೆ. ಇದು ಮತವಾಗಿ ಪರಿವರ್ತಿತವಾಗಿದೆ ಎಂದರು.
ಭ್ರಷ್ಟಾಚಾರ ರಹಿತ, ಜಾತಿ ಮತಗಳ ಮೀರಿದ, ಸ್ವಜನಪಕ್ಷಪಾತ ಇಲ್ಲದ ಆಡಳಿತವನ್ನು ಜನರು ಬೆಂಬಲಿಸಿದ್ದಾರೆ. ಕಾಂಗ್ರೆಸ್ಗೆ ಅಭಿವೃದ್ಧಿ ದೃಷ್ಟಿಯೂ ಇಲ್ಲ, ನೀತಿಯೂ ಇಲ್ಲ. ಕುಟುಂಬ ರಾಜಕಾರಣ ಮೀರಿ ಅವರಿಗೆ ದೊಡ್ಡದ್ಯಾವುದೂ ಇಲ್ಲ. ಲಡ್ಕಿ ಹೂಂ ಲಡ್ ಸಕ್ತೀ ಹೂಂ ಪ್ರಚಾರ ಪಡೀತು. ಆದ್ರೆ, ಮತವಾಗಲಿಲ್ಲ ಎಂದು ಕಾಂಗ್ರೆಸ್ಗೆ ಸಿ ಟಿ ರವಿ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ, ಡಿಕೆಶಿ ಕಾಲೆಳೆದ ಸಿ ಟಿ ರವಿ :ಕಾಂಗ್ರೆಸ್ನಲ್ಲಿ ಸಿಎಂ ಆಗಲು ಹೊಸ ಪಂಚೆ, ಶಲ್ಯ ಕೊಂಡ್ಕೊಂಡವರಿದ್ದಾರೆ. ಕೋಟು, ಸೂಟು ಹೊಲೆಸ್ಕೊಂಡವರೂ ಇದ್ದಾರೆ. ಅವರ ಕನಸು ಇಲ್ಲಿ ನನಸಾಗಲ್ಲ. ಯುಪಿ, ಉತ್ತರಾಖಂಡ್, ಗೋವಾದಲ್ಲಿ ಆದದ್ದೇ ಇಲ್ಲೂ ಆಗುತ್ತೆ. ಕಾಂಗ್ರೆಸ್ನ ಅಭಿವೃದ್ಧಿಹೀನ ರಾಜಕಾರಣ ಇಲ್ಲಿ ನಡೆಯಲ್ಲ. ಕರ್ನಾಟಕದಲ್ಲೂ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಹಿಂದುತ್ವದ ಪ್ರಯೋಗ ಬಗ್ಗೆ ಸಿ ಟಿ ರವಿ ಉತ್ತರ ನೀಡಿ, ಹಿಂದುತ್ವದಲ್ಲಿ ಕಟು, ಮೃದು ಹಿಂದುತ್ವ ಅನ್ನೋದು ಇಲ್ಲ. ಹಿಂದುತ್ವ ಅಂದ್ರೆ ಹಿಂದುತ್ವ ಮಾತ್ರ. ಹಿಂದುತ್ವನ್ನು ಜಾತಿವಾದಿಗಳು ತಪ್ಪಾಗಿ ಅರ್ಥೈಸಿದರು.
ಸರ್ವೇಜನೋ ಸುಖಿನೋಭವಂತು ಎಂಬುದೇ ಹಿಂದುತ್ವ. ಸಿದ್ದರಾಮಯ್ಯ ಅವರಂತಹ ನಾಯಕರು ಹಿಂದುತ್ವವನ್ನು ತಪ್ಪಾಗಿ ವ್ಯಾಖ್ಯಾನ ಮಾಡಿದ್ದಾರೆ. ಕೇಸರಿ ಶಾಲು ಬೇಡ, ಟೋಪಿ ಹಾಕಿ ಅಂದ್ರು. ಕೇಸರಿ ಶಾಲೂ, ಟೋಪಿಯೂ ಬೇಕು ಅನ್ನೋದು ಹಿಂದುತ್ವ ಎಂದರು.
ಓದಿ:ನಿಮ್ಮ ಪಕ್ಷದ ಲೀಡರ್ ಯಾರು? ಕಾಂಗ್ರೆಸ್ಗೆ ಬಿಎಸ್ವೈ ಪ್ರಶ್ನೆ:ನಿಮ್ಮ ಬಗ್ಗೆ ಈಗಾಗಲೇ ಜನ ತೀರ್ಮಾನ ಮಾಡಿದಾರೆ ಎಂದು ಸಿದ್ದು ಟಾಂಗ್