ಕರ್ನಾಟಕ

karnataka

ETV Bharat / city

ತಾಕತ್ತಿದ್ದರೆ Bitcoin ವಿಚಾರ ಕುರಿತು ಸಾರ್ವಜನಿಕ ಚರ್ಚೆಗೆ ಬನ್ನಿ: ಸಿದ್ದರಾಮಯ್ಯಗೆ ಬಿಜೆಪಿ ಬಹಿರಂಗ ಸವಾಲು - Bitcoin scam

ಬಿಟ್ ಕಾಯಿನ್ ಹಗರಣಕ್ಕೆ(Bitcoin scam) ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಸಾರ್ವಜನಿಕ ಚರ್ಚೆಗೆ ಬನ್ನಿ, ನೀವು ಹೇಳಿದ ಸ್ಥಳದಲ್ಲಿ ಚರ್ಚೆಗೆ ಸಿದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಬಿಜೆಪಿ(BJP) ಬಹಿರಂಗ ಸವಾಲು ಹಾಕಿದೆ.

BJP invites congress for discussion about bitcoin  issue
ಕಾಂಗ್ರೆಸ್​ ಅನ್ನು ಚರ್ಚೆಗೆ ಆಹ್ವಾನಿಸಿದ ಬಿಜೆಪಿ

By

Published : Nov 16, 2021, 5:23 PM IST

ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ(Bitcoin scam) ಕಾಂಗ್ರೆಸ್ ಹಿಟ್ & ರನ್ ಮಾಡುತ್ತಿದೆ. ತಾಕತ್ತಿದ್ದರೆ ದಾಖಲೆಗಳೊಂದಿಗೆ ಸಾರ್ವಜನಿಕ ಚರ್ಚೆಗೆ ಬನ್ನಿ, ನೀವು ಹೇಳಿದ ಸ್ಥಳದಲ್ಲಿ ಚರ್ಚೆಗೆ ಸಿದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಬಿಜೆಪಿ(BJP) ಬಹಿರಂಗ ಸವಾಲು ಹಾಕಿದೆ.

ಸಾರ್ವಜನಿಕ ಚರ್ಚೆಗೆ ಸಿದ್ಧ:

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ ಮಹೇಶ್, ಕುರುಡ ಆನೆಯನ್ನು ವರ್ಣಿಸುವಂತೆ ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್‌ನ ವರ್ತನೆ ಕಾಣುತ್ತಿದೆ. ತಮ್ಮ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಕಾಂಗ್ರೆಸ್​ನೊಳಗೆ ಒಂದು ವೇದಿಕೆಯನ್ನು ಬಿಟ್ ಕಾಯಿನ್ ವಿಚಾರದ ಮುಖಾಂತರ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರೇ ತಾಕತ್ತಿದ್ದರೆ ದಾಖಲೆ ಸಮೇತ ಬನ್ನಿ, ಸಾರ್ವಜನಿಕವಾಗಿ ಚರ್ಚೆ ಮಾಡೋಣ. ಯಾವುದಾದರೂ ಒಂದೇ ಒಂದು ದಾಖಲೆ ಇರಿಸಿಕೊಂಡು ಬನ್ನಿ, ನೀವು ಹೇಳಿದ ಸ್ಥಳದಲ್ಲಿ ಸಾರ್ವಜನಿಕ ಚರ್ಚೆಗೆ ನಾವು ತಯಾರಿದ್ದೇವೆ ಎಂದು ಸವಾಲೆಸೆದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್

ಕಳೆದ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ತಿಂಗಳಿಗೊಂದರಂತೆ ಹೊಸ ವಿಷಯವನ್ನು ತಂದು ಜನರ ಮನಸ್ಸಿನಲ್ಲಿ ಅಭದ್ರತೆ ನಿರ್ಮಾಣ ಮಾಡಲು ಯತ್ನಿಸುತ್ತಿದ್ದಾರೆ. ಈಗಲೂ ಬೇಕಾದರೆ ಎರಡು ಮೂರು ದಿನಗಳಲ್ಲಿ ಬಿಟ್ ಕಾಯಿನ್ ವಿಚಾರ ಬಿಟ್ಟು ಬೇರೆ ವಿಷಯ ತರಲಿದ್ದಾರೆ ಎಂದು ಹೇಳಿದರು.

ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಮೌನವಾಗಿದ್ದಾರೆ ಎನ್ನುತ್ತಿದ್ದಾರೆ. ನಮ್ಮ ಅಧ್ಯಕ್ಷರಿಗೆ ವರ್ಷಪೂರ್ತಿ ಮಾಡುವಷ್ಟು ಸಂಘಟನಾತ್ಮಕ ಕೆಲಸ ಕಾರ್ಯಗಳಿವೆ. ನಾವು ಬೂತ್ ಲೆವೆಲ್​ನಲ್ಲಿ ಪಕ್ಷವನ್ನು ತೆಗೆದುಕೊಂಡು ಹೋಗಿ ವಿಸ್ತಾರ ಮಾಡುವ ನಿಟ್ಟಿನಲ್ಲಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ 18 ಸ್ಥಾನ ಗೆಲ್ಲಬೇಕು ಎಂದು ಕಟೀಲ್ ಹಗಲು-ರಾತ್ರಿ ಪರಿಶ್ರಮ ಹಾಕುತ್ತಿದ್ದಾರೆ. ನೀವು ನಿರುದ್ಯೋಗಿಯಾಗಿ ನಮ್ಮ ಅಧ್ಯಕ್ಷರಿಗೆ ಉತ್ತರ ಕೊಡಿ ಎಂದು ಆಗ್ರಹಿಸುತ್ತಿದ್ದೀರಿ. ಬಿಜೆಪಿ ಈ ರೀತಿಯ ಬೃಹನ್ನಳೆ ನಾಟಕವನ್ನು ರಾಜಕಾರಣದಲ್ಲಿ ಏಳು ದಶಕದಿಂದ ನೋಡಿ ಇಂದು ಈ ಹಂತಕ್ಕೆ ಬಂದು ತಲುಪಿದೆ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ:

2016ನೇ ಇಸವಿಯಿಂದ ಬಿಟ್ ಕಾಯಿನ್ ದಂಧೆ ಇತ್ತು ಅಂತ ಕಾಂಗ್ರೆಸ್​ನ ರಾಜ್ಯ ಉಸ್ತುವಾರಿ ಸುರ್ಜೇವಾಲ ಪ್ರಾಮಾಣಿಕ ಹೇಳಿಕೆ ಕೊಟ್ಟಿದ್ದಾರೆ. ಆಗ ಅಧಿಕಾರದಲ್ಲಿ ಕಾಂಗ್ರೆಸ್ ಇತ್ತು, ಯಾಕೆ ವಿಚಾರಣೆ ಮಾಡಲಿಲ್ಲ? ಎಂದು ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಖರ್ಗೆಗೂ ಪ್ರಚಾರದ ಹಪಾಹಪಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣದದಿಂದ ಅವರೂ ಬ್ಲಾಕ್ ಮನಿ ಪಡ್ಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಗಣೇಶ್ ಕಾರ್ಣಿಕ್ ಆರೋಪಿಸಿದರು.

ಡಿಕೆಶಿಯನ್ನು ಸೈಡ್ ಲೈನ್ ಮಾಡುವ ಹುನ್ನಾರ:

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಇದಕ್ಕಾಗಿ ಬಿಟ್ ಕಾಯಿನ್ ಹಗರಣ ಕೈಗೆತ್ತಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಬೇರೆ ಯಾವುದೇ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಮಸ್ಯೆ, ಬರ, ಪ್ರವಾಹ ಬಗ್ಗೆ ರಾಜ್ಯ ಸಂಚಾರ ಮಾಡಲಿಲ್ಲ. ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲು ಬಿಟ್ ಕಾಯಿನ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಡಿ ಕೆ ಶಿವಕುಮಾರ್ ಮೇಲೆ ನನಗೆ ಅನುಕಂಪ ಇದೆ. ಅವರು ಅಧ್ಯಕ್ಷ ಆದಾಗಿಂದ ಒಂದು ದಿನ ಕೂಡಾ ಅವರಿಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಇದು ಕಾಂಗ್ರೆಸ್​ನ ಆಂತರಿಕ ವಿಚಾರ. ಡಿಕೆಶಿ ಮೂಲೆಗುಂಪು ಮಾಡುವ ಸಲುವಾಗಿ ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡಿ ಆ ಮೂಲಕ ಹೈಕಮಾಂಡ್ ನಾಯಕರ ಮುಂದೆ ತಾನು ಬಿಂಬಿಸಿಕೊಳ್ಳೋದು ಸಿದ್ದರಾಮಯ್ಯರ ಉದ್ದೇಶವಾಗಿದೆ. ಇದು ಡಿಕೆಶಿಯನ್ನು ಸೈಡ್ ಲೈನ್ ಮಾಡುವ ಹುನ್ನಾರ ಎಂದರು.

ಇದನ್ನೂ ಓದಿ:ಕೌಟುಂಬಿಕ ಕಲಹ: ಲಾಡ್ಜ್​​​​ನಲ್ಲಿ ನೇಣಿಗೆ ಶರಣಾದ ಪೊಲೀಸ್ ಕಾನ್​​​​ಸ್ಟೇಬಲ್

ಪ್ರಿಯಾಂಕ್ ಖರ್ಗೆ ಐಟಿಬಿಟಿ ಸಚಿವರಾಗಿದ್ದಾಗ ಆರೋಪಿ ಹ್ಯಾಕರ್​ ಶ್ರೀಕಿಯನ್ನು ಭೇಟಿ ಮಾಡಿದ್ದರು. ಶ್ರೀಕಿಯನ್ನು ಕರೆಸಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಶ್ರೀಕಿ ಭೇಟಿ ಮಾಡಿಲ್ಲ ಅಂತ ಹೇಳಲಿ ನೋಡೋಣ ಎಂದು ಗಣೇಶ್​ ಕಾರ್ಣಿಕ್​ ಸವಾಲೆಸೆದರು.

ABOUT THE AUTHOR

...view details