ಕರ್ನಾಟಕ

karnataka

ETV Bharat / city

ನ.9 ರಂದು ಹಾನಗಲ್ ಸೋಲಿನ ಕುರಿತು ಬಿಜೆಪಿ ಆತ್ಮಾವಲೋಕನ ಸಭೆ

ಹಾನಗಲ್ ಉಪ ಚುನಾವಣೆ ಸೋಲಿನ ಕುರಿತು ನವೆಂಬರ್ 9 ರಂದು ಬಿಜೆಪಿ ಆತ್ಮಾವಲೋಕನ ಸಭೆ ಹಮ್ಮಿಕೊಂಡಿದ್ದು, ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ತಂಡ ಭಾಗವಹಿಸಲಿದೆ.

By

Published : Nov 4, 2021, 11:34 AM IST

BJP introspective meeting
ಬಿಜೆಪಿ ಆತ್ಮಾವಲೋಕನ ಸಭೆ

ಬೆಂಗಳೂರು: ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಾದ ಸೋಲಿನ ಕುರಿತು ನವೆಂಬರ್ 9 ರಂದು ಬಿಜೆಪಿ ಆತ್ಮಾವಲೋಕನ ಸಭೆ ನಡೆಸಲಿದ್ದು, ಸೋಲಿನ ಲೋಪದೋಷ ಹಾಗೂ ಭವಿಷ್ಯದ ಚುನಾವಣೆ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.

ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಪಕ್ಷಕ್ಕೆ ಸಿಎಂ ತವರಿನಲ್ಲೇ ಭಾರಿ ಮುಖಭಂಗವಾಗಿದೆ. ರಾಜ್ಯ ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಜೊತೆ ಸಿಎಂ ಬೊಮ್ಮಾಯಿ ಜಂಟಿ ಪ್ರಚಾರ ನಡೆಸಿ, ಐದು ದಿನ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದರೂ ಕೂಡ ಹಾನಗಲ್ ಕೈತಪ್ಪಿದ್ದು, ಸಿಎಂ ಟೀಕೆಗಳನ್ನು ಎದುರಿಸುವಂತಾಗಿದೆ.

ಈ ನಡುವೆ ಬಿಜೆಪಿ ಸೋಲಿನ ಕುರಿತು ಆತ್ಮಾವಲೋಕನ ಸಭೆ ನಡೆಸಲು ಮುಂದಾಗಿದ್ದು, ನವೆಂಬರ್ 9 ರಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ತಂಡ ಭಾಗವಹಿಸಲಿದೆ.

ಹಾಗನಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣ, ಎಲ್ಲಿ ಹಿನ್ನಡೆಯಾಗಿದೆ, ಏನು ಕಾರಣ ಎನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಇದೇ ವೇಳೆ ಪಕ್ಷ ಸಂಘಟನೆ, ಬಿಬಿಎಂಪಿ ಸೇರಿದಂತೆ ಮುಂಬರಲಿರುವ ಚುನಾವಣೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗ್ತಿದೆ.

ಸಿಎಂ ದೆಹಲಿ ಪ್ರವಾಸ:

ದೀಪಾವಳಿ ಹಬ್ಬ ಮುಗಿಸಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. ನವೆಂಬರ್ 6 ರಂದು ದೆಹಲಿಗೆ ತೆರಳಲಿರುವ ಸಿಎಂ, 7 ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಹಾನಗಲ್ ಸೋಲಿನ ಕುರಿತು ವಿವರಣೆ ನೀಡಲಿದ್ದಾರೆ ಎಂದು ಹೇಳಲಾಗ್ತಿದೆ.

ಬಿಎಸ್​ವೈ ದೆಹಲಿ ಪ್ರವಾಸ:

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ರಾಷ್ಟ್ರೀಯ ಕಾರ್ಯಕಾರಣಿಗೆ ನೇಮಕ ಮಾಡಿದ್ದು, ಮೊದಲ ಸಭೆಯಲ್ಲಿ ಭಾಗಿಯಾಗಲು ಮೂವರು ನಾಯಕರು ದೆಹಲಿಗೆ ತೆರಳಲಿದ್ದಾರೆ.

ABOUT THE AUTHOR

...view details