ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವ ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ ವಿಫಲವಾಗಿದ್ದು ಮತ್ತೆ "ಹಳೆಯ ಗಂಡನ ಪಾದವೇ ಗತಿ" ಎನ್ನುವ ಗಾದೆ ಮಾತಿನಂತೆ ಯಡಿಯೂರಪ್ಪ ಅವರನ್ನ ವಿಶ್ವಾಸಕ್ಕೆ ತಗೆದುಕೊಂಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಸಿದ ನಂತರ ಬಿಜೆಪಿ ಹೈಕಮಾಂಡ್ ತಾನಂದುಕೊಂಡಂತೆ ಬಿಎಸ್ವೈ ಅವರಿಂದ ಅಂತರ ಕಾಯ್ದುಕೊಂಡೇ ಸರ್ಕಾರ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿತ್ತು. ಆದರೆ, ಪ್ರಬಲ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾದ ಯಡಿಯೂರಪ್ಪ ದೂರವಿಟ್ಟು ಚುನಾವಣೆ ಎದುರಿಸುವುದು ಕಷ್ಟವೆನ್ನುವ ಕಹಿ ಸತ್ಯ ಅರಿತ ಬಿಜೆಪಿ ವರಿಷ್ಠರು ಬಿಎಸ್ವೈ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಹುಬ್ಬೇರಿಸುವಂತಹ ಹುದ್ದೆಯನ್ನು ನೀಡಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪಗೆ ಉನ್ನತ ಸ್ಥಾನಮಾನ ಬಿಜೆಪಿಯಲ್ಲಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಗಳಾದ ಸಂಸದೀಯ ಮಂಡಳಿ ಹಾಗೂ ಬಿಜೆಪಿ ಕೇಂದ್ರ ಚುನಾವಣೆ ಸಮಿತಿಗಳ ಸದಸ್ಯರನ್ನಾಗಿ ಯಡಿಯೂರಪ್ಪರನ್ನು ನೇಮಿಸಿದೆ. ಆ ಮೂಲಕ ಯಡಿಯೂರಪ್ಪ ಸೈಡ್ಲೈನ್ ಮಾಡಬೇಕೆನ್ನುವ ಪಕ್ಷದೊಳಗಿನ ವಿರೋಧಿಗಳಿಗೆ ಮತ್ತು ಪ್ರಮುಖವಾಗಿ ಕಾಂಗ್ರೆಸ್ಗೆ ಶಾಕ್ ನೀಡಿದೆ.
ಬಿಎಸ್ವೈಗೆ ಸ್ಥಾನಮಾನ:ರಾಜ್ಯ ವಿಧಾನಸಭೆಗೆ ಎಲೆಕ್ಷನ್ ಇನ್ನು 8 ತಿಂಗಳು ಮಾತ್ರ ಬಾಕಿಯಿದ್ದು, ಈಗಿರುವ ಪರಿಸ್ಥಿಯೇ ಮುಂದುವರಿದರೆ ಚುನಾವಣೆಯಲ್ಲಿ ಬಿಜೆಪಿಯು ಅತಿ ಹೆಚ್ಚಿನ ಸೀಟುಗಳನ್ನು ಕಳೆದುಕೊಳ್ಳಲಿದೆ. ಇದರ ಲಾಭವನ್ನು ಪ್ರತಿ ಪಕ್ಷ ಕಾಂಗ್ರೆಸ್ ಪಡೆದುಕೊಳ್ಳಲಿದೆ ಎನ್ನುವ ಪಕ್ಷದ ಆಂತರಿಕ ಚುನಾವಣೆ ಸಮೀಕ್ಷೆಗಳಿಂದ ಬಿಜೆಪಿ ಹೈಕಮಾಂಡ್ ಅಕ್ಷರಶಃ ಆತಂಕಗೊಂಡಿದೆ.
ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡು ಹೋದರೆ ಪಕ್ಷಕ್ಕೆ ಹಾನಿ ನಿಶ್ಚಿತ ಎಂದು ತಿಳಿದ ಹೈಕಮಾಂಡ್, ಪಕ್ಷದಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲ್ಪಟ್ಟ ಯಡಿಯೂರಪ್ಪಗೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣೆ ಸಮಿತಿಯಲ್ಲಿ ಸದಸ್ಯರಾಗಿ ನೇಮಕ ಮಾಡುವ ಮೂಲಕ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದೆ.
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸಲು ಬಯಸಿದ್ದರು. ಒಂದು ವರ್ಷದಿಂದಲೂ ಯಡಿಯೂರಪ್ಪಗೆ ಪಕ್ಷದ ವೇದಿಕೆಯಲ್ಲಿ ರಾಜ್ಯ ಪ್ರವಾಸ ನಡೆಸಲು ಅವಕಾಶ ನೀಡದೇ ನಿರ್ಲಕ್ಷ ಮಾಡುತ್ತಲೇ ಬರಲಾಗಿತ್ತು.
ಬಿಜೆಪಿಯಲ್ಲಿ ಯಡಿಯೂರಪ್ಪಗೆ ಉನ್ನತ ಸ್ಥಾನಮಾನ ಈ ಸೂಕ್ಷ್ಮ ಅರಿತ ಯಡಿಯೂರಪ್ಪ ಸಹ ಇತ್ತೀಚೆಗಿನ ದಿನಗಳಲ್ಲಿ ಪಕ್ಷದಿಂದಲೂ ಒಲ್ಲದ ಮನಸ್ಸಿನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ಪ್ರಧಾನಿ ಮೋದಿ ರಾಜ್ಯ ಪ್ರವಾಸದಲ್ಲಿದ್ದಾಗಲೂ ಸಹ ಯಡಿಯೂರಪ್ಪನವರು 15 ದಿನ ವಿದೇಶ ಪ್ರವಾಸ ಕೈಗೊಂಡು ಖಾರವಾದ ಸಂದೇಶ ರವಾನಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಸಚಿವ ಪದವಿ ಕೊಡಿಸಲು ಮಾಜಿ ಸಿಎಂ ಯಡಿಯೂರಪ್ಪ ಅವರು ಸಾಕಷ್ಟು ಕಸರತ್ತು ನಡೆಸಿದರೂ ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕಲಿಲ್ಲ. ಪ್ರತಿ ಸಂದರ್ಭದಲ್ಲಿಯೂ ವಿಜಯೇಂದ್ರಗೆ ಮೇಲ್ಮನೆಗೆ ನೇಮಕ ಮಾಡುವ ಅವಕಾಶ ಬಂದಾಗ ನಿರಾಕರಿಸುತ್ತಲೇ ಬಂದಿತು. ಈ ವಿದ್ಯಮಾನದಿಂದ ಯಡಿಯೂರಪ್ಪ ಆಕ್ರೋಶಗೊಂಡು ಮಗನ ರಾಜಕೀಯ ಭವಿಷ್ಯದ ಬಗ್ಗೆ ಪರ್ಯಾಯ ಮಾರ್ಗಗಳ ಬಗ್ಗೆ ಅನ್ವೇಷಣೆ ಸಹ ನಡೆಸಿದರೆಂದು ಹೇಳಲಾಗಿದೆ.
ಒಂದು ಹಂತದಲ್ಲಿ ಹತಾಶರಾದ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುತ್ತಿದ್ದೇನೆ. ಶಿಕಾರಿಪುರದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಕ್ಷೇತ್ರದ ಜನ ಗೆಲ್ಲಿಸಿಕೊಂಡು ಬರಬೇಕೆಂದು ಮನವಿ ಮಾಡಿದ್ದರು.
ಯಡಿಯೂರಪ್ಪ ಅವರ ಚುನಾವಣೆ ನಿವೃತ್ತಿಯ ಮತ್ತು ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎನ್ನುವ ಈ ಹೇಳಿಕೆ ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ಗೆ ಬಿಸಿ ಮುಟ್ಟಿಸಿತು. ಪಕ್ಷದ ಮತ ಬ್ಯಾಂಕ್ ಮೇಲೆ ಅಡ್ಡ ಪರಿಣಾಮ ಬೀರುವ ಅಪಾಯದ ಮುನ್ಸೂಚನೆಯನ್ನೂ ನೀಡಿತೆಂದು ವಿಶ್ಲೇಷಿಸಲಾಯಿತು.
ಸಿದ್ದರಾಮೋತ್ಸವದಿಂದ ಎಚ್ಚರಗೊಂಡ ಹೈಕಮಾಂಡ್:ಮಾಜಿ ಸಿಎಂ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಕಳೆದ ಒಂದು ವರ್ಷದಿಂದ ನಿರ್ಲಕ್ಷ್ಯ ಮಾಡುತ್ತಲೇ ಬಂದ ಬಿಜೆಪಿ ಹೈಕಮಾಂಡ್ಗೆ ಆತಂಕ ಉಂಟು ಮಾಡಿದ್ದು, ಒಂದು ರೀತಿಯಲ್ಲಿ ಅಪಾಯದ ಮುನ್ಸೂಚನೆ ನೀಡಿದ್ದು ಪ್ರತಿಪಕ್ಷ ನಾಯಕರಾದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿದ್ದರಾಮಯ್ಯನವರ ಹುಟ್ಟು ಹಬ್ಬ "ಸಿದ್ದರಾಮೋತ್ಸವಕ್ಕೆ" ಸೇರಿದ್ದ ಲಕ್ಷಾಂತರ ಸಂಖ್ಯೆಯ ಜನಸಾಗರ.
ಈ ಕಾರ್ಯಕ್ರಮಕ್ಕೆ ವ್ಯಕ್ತವಾಗಿದ್ದ ಜನ ಸ್ಪಂದನೆ ಗಮನಿಸಿದ ದೆಹಲಿ ಬಿಜೆಪಿ ವರಿಷ್ಠರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರಸ್ ಪಕ್ಷದೆದುರು ಸೋಲುವ ಭೀತಿ ಉಂಟಾಗತೊಡಗಿತು. ತಕ್ಷಣವೇ ದೆಹಲಿಯಿಂದ ಬೆಂಗಳೂರಿಗೆ ಧಾವಿಸಿದ ಬಿಜೆಪಿಯ ಚಾಣಕ್ಯ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕರಸಿಕೊಂಡು ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದರು. ಅದರ ಪರಿಣಾಮವೇ ಯಡಿಯೂರಪ್ಪಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮತ್ತು ಕೇಂದ್ರ ಚುನಾವಣೆ ಸಮಿತಿಯಲ್ಲಿ ಸದಸ್ಯರಾಗಿ ನೇಮಕ ಮಾಡಿರುವುದು.
ಬಿಜೆಪಿಯಲ್ಲಿ ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಮುಗಿದೇ ಹೋಯಿತು ಎಂದು ಭಾವಿಸಿ ಪಕ್ಷದಲ್ಲಿ ಇನ್ನು ಮುಂದೆ ತಮ್ಮದೇ ದರ್ಬಾರು ಎಂದುಕೊಂಡಿದ್ದ ಹಾಗೂ ಬಿಜೆಪಿ ಯಡಿಯೂಪ್ಪನವರನ್ನು ನಿರ್ಲಕ್ಷಿಸಿದೆ ಎಂದು ಪ್ರಚಾರ ನಡೆಸಿ ಲಿಂಗಾಯತ ಮತಗಳನ್ನು ಸೆಳೆಯಲು ಸಜ್ಜಾಗಿದ್ದ ಕಾಂಗ್ರೆಸ್ಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ.
ಯಡಿಯೂರಪ್ಪ ಅವರಿಗೆ ಉತ್ತಮ ಹುದ್ದೆ ನೀಡಿ ಅವರ ಮಾರ್ಗದರ್ಶನದಲ್ಲಿಯೇ ಚುನಾವಣೆ ಎದುರಿಸಿ ಹೆಚ್ಚಿನ ಸೀಟು ಗೆಲ್ಲುವ ಆಶಯದ ಸಂದೇಶವನ್ನ ನೀಡಿದೆ. ಆ ಮೂಲಕ ಪಕ್ಷದಿಂದ ಕೈಬಿಟ್ಟು ಹೋಗುತ್ತಿದ್ದ ಲಿಂಗಾಯತ ಮತಗಳನ್ನು ಉಳಿಸಿಕೊಂಡು ಹೆಚ್ಚಿ ಸೀಟು ಗೆದ್ದು ಅಧಿಕಾರಕ್ಕೆ ಬರಲು ಹೈಕಮಾಂಡ್ ಅನುಸರಿಸಿದ ಡ್ಯಾಮೇಜ್ ಕಂಟ್ರೋಲ್ ನಡೆಯಾಗಿದೆ.
(ಇದನ್ನೂ ಓದಿ: ಪ್ರಮೋಷನ್ ಕೊಟ್ಟು ಬಿಎಸ್ವೈ ಮುಕ್ತ ಬಿಜೆಪಿ ಮಾಡಲು ಸಂತೋಷ ಕೂಟ ಯಶಸ್ವಿ.. ಕಾಂಗ್ರೆಸ್ ಲೇವಡಿ)