ಬೆಂಗಳೂರು:ರಾಜ್ಯ ಬಿಜೆಪಿ ಪಾಳಯದಲ್ಲಿನ ಆಂತರಿಕ ಕಲಹಕ್ಕೆ ತೆರೆ ಎಳೆಯಲು ಕಡೆಗೂ ಹೈಕಮಾಂಡ್ ರಂಗಪ್ರವೇಶಕ್ಕೆ ಸಜ್ಜಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರನ್ನು ಕಳುಹಿಸಿ ಕೊಡುತ್ತಿದೆ. ಹೈಕಮಾಂಡ್ ಸೂಚನೆ ಹಿನ್ನೆಲೆ, ಸಿಂಗ್ ಮೂರು ದಿನಗಳ ಕಾಲ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಜೂನ್ 16 ಅಥವಾ 17 ರಂದು ಬೆಂಗಳೂರಿಗೆ ಬರಲಿದ್ದು, ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಓದಿ: ನಾಯಕತ್ವ ಬದಲಾವಣೆ ಅನ್ನೋರು ಪಂಕ್ಚರ್ ಆಗಿರುವ ಬಸ್ಗೆ ಟವೆಲ್ ಹಾಕಿದ್ದಾರೆ: ಆರ್. ಅಶೋಕ್ ವ್ಯಂಗ್ಯ
ಪದೇ ಪದೇ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಗೊಂದಲ ಸೃಷ್ಟಿಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹೇಳಿಕೆ ನೀಡುವ ಹಂತಕ್ಕೆ ತಲುಪಿದೆ. ಈ ಹಿಂದೆ ಶಾಸಕರ ಪ್ರತ್ಯೇಕ ಸಭೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ, ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಆರೋಪ, ಅರವಿಂದ ಬೆಲ್ಲದ್ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ವದಂತಿಗಳಿಗೆ ಸಿಎಂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಸಂಪುಟ ಸಹೋದ್ಯೋಗಿ ಸಿ.ಪಿ. ಯೋಗೀಶ್ವರ್ ದೆಹಲಿಗೆ ಹೋಗಿ ಬಂದ ನಂತರ ಕೆರಳಿದ ಯಡಿಯೂರಪ್ಪ ಮೌನ ಮುರಿದು ಹೈಕಮಾಂಡ್ ಹೇಳಿದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಸಿಎಂ ಬಿಎಸ್ವೈ ಈ ಹೇಳಿಕೆ ನೀಡುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಮೂಡಿದೆ. ಯಡಿಯೂರಪ್ಪ ಪರ-ವಿರೋಧಿ ಬಣ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ. ಸಹಿ ಸಂಗ್ರಹದಂಥ ಚಟುವಟಿಕೆ ಆರಂಭಿಸಿ ಬಣ ರಾಜಕೀಯಕ್ಕೆ ಮುಂದಾಗಿವೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಬಣ ರಾಜಕೀಯಕ್ಕೆ ತೆರೆ ಎಳೆಯಲು ರಂಗಪ್ರವೇಶಕ್ಕೆ ಸಜ್ಜಾಗಿದೆ.
ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸುತ್ತಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯಡಿಯೂರಪ್ಪ ಬೆಂಬಲಿಗರ ಅಭಿಪ್ರಾಯ ಪಡೆಯಲಿದ್ದಾರೆ. ವಿರೋಧಿ ಬಣದವರ ಅಭಿಪ್ರಾಯವನ್ನೂ ಆಲಿಸಲಿದ್ದು, ರಾಜ್ಯ ಘಟಕದ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಯಡಿಯೂರಪ್ಪ ಜೊತೆಗೂ ಸಮಾಲೋಚನೆ ನಡೆಸಿ ರಾಜ್ಯ ಘಟಕದಲ್ಲಿ ಎದ್ದಿರುವ ಅಸಮಾಧಾನದ ಹೊಗೆಯನ್ನು ಶಮನಗೊಳಿಸಲಿದ್ದಾರೆ. ನಾಯಕತ್ವದ ಬಗ್ಗೆ ಸ್ಪಷ್ಟತೆಯನ್ನು ಪ್ರಕಟಿಸಲಿದ್ದು, ಎಲ್ಲ ಗೊಂದಲಕ್ಕೂ ತೆರೆ ಎಳೆದು ಹೈಕಮಾಂಡ್ ಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.