ಬೆಂಗಳೂರು: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.
ಘಟನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಹೈಕಮಾಂಡ್ ಮಾತುಕತೆ ನಡೆಸಿದ್ದು, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ, ಈಶ್ವರಪ್ಪ ವಿರುದ್ಧದ ಆರೋಪ ಸೇರಿ ವಿಸ್ತೃತವಾದ ಮಾಹಿತಿಯನ್ನು ಪಡೆದುಕೊಂಡಿದೆ. ತಡರಾತ್ರಿ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿರುವ ಮಾಹಿತಿಯನ್ನೂ ಹೈಕಮಾಂಡ್ ಗೆ ನೀಡಿದ್ದಾರೆ. ಚುನಾವಣಾ ವರ್ಷವಾಗಿರುವ ಕಾರಣ ಮೊದಲು ರಾಜೀನಾಮೆ ಪಡೆಯುವುದು ಒಳಿತು ಎನ್ನುವ ನಿಲುವುಗೆ ಹೈಕಮಾಂಡ್ ಬಂದಿದ್ದು ರಾಜೀನಾಮೆ ಪಡೆಯುವಂತೆ ಸಿಎಂಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.