ಬೆಂಗಳೂರು:ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ರಾಜ್ಯದಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮಂತ್ರಿಮಂಡಲ ವಿಸ್ತರಣೆ ಮಾಡುವುದು ಉತ್ತಮವೋ? ಅಥವಾ ಕೆಲವು ಸಚಿವರನ್ನು ಕೈಬಿಟ್ಟು ಪುನರ್ ರಚನೆ ಮಾಡುವುದು ಹೆಚ್ಚು ಸೂಕ್ತವೇ? ಎನ್ನುವುದರ ಬಗ್ಗೆ ಯೋಚಿಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜಕೀಯ ಲಾಭ - ನಷ್ಟದ ಲೆಕ್ಕಾಚಾರ ಹಾಕತೊಡಗಿದೆ.
ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಪ್ರಕ್ರಿಯೆಗಳ ಬಗ್ಗೆ ಹೈಕಮಾಂಡ್ ನಿಗೂಢ ನಡೆ ಅನುಸರಿಸುತ್ತಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯುಗೂ ಸಹ ಯಾವುದೇ ಸಂಗತಿ ತಿಳಿಸದೇ ತನ್ನದೇ ಆದ ಲೆಕ್ಕಾಚಾರದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ತೊಡಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಿಮಂಡಲದಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕ್ಯಾಬಿನೆಟ್ ವಿಸ್ತರಣೆಗೆ ಹೈಕಮಾಂಡ್ ಬಳಿ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಆದರೆ, ಇದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೆ ಹೈಕಮಾಂಡ್ ತನ್ನ ನಿಲುವನ್ನು ಗೌಪ್ಯವಾಗಿಟ್ಟುಕೊಂಡಿದೆ.
ಹೈಕಮಾಂಡ್ಗೆ ಬಂಡಾಯದ ಭೀತಿ: ಬೊಮ್ಮಾಯಿ ಮಂತ್ರಿಮಂಡಲದಲ್ಲಿನ ಹತ್ತರಿಂದ ಹನ್ನೆರಡು ಸಚಿವರನ್ನು ಕೈಬಿಟ್ಟು ಪುನರ್ ರಚನೆ ಮಾಡುವ ಸಾಧ್ಯತೆಗಳ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಆದರೆ, ಚುನಾವಣೆ ಒಂದು ವರ್ಷವಿರುವಾಗ ಹೆಚ್ಚು ಸಚಿವರನ್ನ ಕೈಬಿಟ್ಟರೆ ಮಂತ್ರಿಸ್ಥಾನ ಕಳೆದುಕೊಂಡವರ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳ ಭೀತಿ ಹೈಕಮಾಂಡ್ ಅನ್ನು ಕಾಡುತ್ತಿದೆ. ಬಿಜೆಪಿ ಸರ್ಕಾರದ ಎರಡು ಅವಧಿ ಮತ್ತು ಹಿಂದಿನ ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾದವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಹೈಕಮಾಂಡ್ ಪರಿಶೀಲನೆ ನಡೆಸುತ್ತಿದೆ.