ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಸಂಗತಿ ಮತ್ತೆ ಜೋರಾಗಿ ಸದ್ದು ಮಾಡತೊಡಗಿದೆ. ವದಂತಿಯ ರೂಪದ ಸುದ್ದಿ ದಟ್ಟವಾಗಿ ಹರಡಿದ್ದು, ಬಿಜೆಪಿ ಹೈಕಮಾಂಡ್ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಬಿಜೆಪಿಯ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿ ಪಕ್ಷದ ಪ್ರಮುಖರು ಮತ್ತು ಸಿಎಂ ಬೊಮ್ಮಾಯಿ ಜೊತೆ ಸಮಾಲೋಚನೆ ನಡೆಸಿದ ಮೇಲೆ ಸಿಎಂ ಬದಲಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದು ತಿಳಿದು ಬಂದಿದೆ.
ಕಳೆದ ಆರು ತಿಂಗಳಿಂದಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುದ್ದಿಗಳು ಆಗಾಗ ಕೇಳಿ ಬರುತ್ತಲೇ ಇವೆ. ಬೊಮ್ಮಾಯಿ ಬಿಜೆಪಿ ಹೈಕಮಾಂಡ್ ಆಯ್ಕೆಯ ಸಿಎಂ ಅಭ್ಯರ್ಥಿಯಲ್ಲ. ಯಡಿಯೂರಪ್ಪ ಶಿಷ್ಯ ಮತ್ತು ಜನತಾ ಪರಿವಾರದ ಮೂಲದವರು ಎನ್ನುವ ಕಾರಣಕ್ಕೆ ಬೊಮ್ಮಾಯಿ ಅವರನ್ನು ಹೈಕಮಾಂಡ್ ಬದಲಾವಣೆ ಮಾಡಿಯೇ ತೀರುತ್ತದೆ ಎನ್ನುವ ಮಾತು ಮೂಲ ಬಿಜೆಪಿಗರ ವಲಯದಿಂದಲೇ ಹರಡುತ್ತಿವೆ.
ಸಿಎಂ ಬೊಮ್ಮಾಯಿ ಬದಲಾಗುತ್ತಾರಾ..? ಅಥವಾ ಪೂರ್ಣಾವಧಿ ತನಕ ಸಿಎಂ ಆಗಿ ಅವರೇ ಮುಂದುವರಿಯುತ್ತಾರಾ ಎನ್ನುವ ಗೊಂದಲದ ಬಗ್ಗೆ ಬಿಜೆಪಿ ಹೈಕಮಾಂಡ್ ಇದುವರೆಗೆ ಯಾವುದೇ ಸ್ಪಷ್ಟನೆ ನಿಡಿಲ್ಲ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಸಿ ಬಿ.ಎಲ್.ಸಂತೋಷ ಸೇರಿದಂತೆ ಹಲವು ಮುಖಂಡರು ಪರೋಕ್ಷವಾಗಿ ಬೊಮ್ಮಾಯಿ ಬದಲಾವಣೆ ಸುಳಿವನ್ನು ಪಕ್ಷದ ಆಂತರಿಕ ವಲಯಕ್ಕೆ ನೀಡುತ್ತಲೇ ಬಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ನಡೆಯಿಂದ ಹೆಚ್ಚಾದ ಅನುಮಾನ:ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹರಡುತ್ತಿರುವ ಹಿಂದೆ ಬಿಜೆಪಿ ಹೈಕಮಾಂಡ್ನ ಹಲವು ಹೆಜ್ಜೆಗಳು ಬಹಳಷ್ಟು ಅನುಮಾನ ಸೃಷ್ಟಿಸಿವೆ. ಹತ್ತಾರು ಬಾರಿ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆಗೆ ಒಪ್ಪಿಗೆ ನಿಡದೇ ಮೌನವಾಗಿರುವುದು ಮುಖ್ಯಮಂತ್ರಿ ಬದಲಾವಣೆಯ ಸೂಚನೆಯಾಗಿರಬಹುದಾ? ಎನ್ನುವ ಅನುಮಾನ ಮೂಡಿದೆ. ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಮಂತ್ರಿ ಮಂಡಲ ವಿಸ್ತರಣೆಗೆ ಅವಕಾಶ ನೀಡದಿರುವುದು ಸರ್ಕಾರದ ನಾಯಕತ್ವ ಬದಲಿಸುವ ಉದ್ದೇಶದಿಂದಲೇ ಕೂಡಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.
ಕರಾವಳಿಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಸಿಎಂ ಬದಲಿಸಬೇಕೆನ್ನುವ ಕೂಗು ಮೂಲ ಬಿಜೆಪಿಗರ ಮತ್ತು ಸಂಘ ಪರಿವಾರದ ಕಡೆಯಿಂದ ವ್ಯಕ್ತವಾಗುತ್ತಿದೆಯಂತೆ. ಪಕ್ಷದ ಕಾರ್ಯಕರ್ತರು ಹಿಂದೂ ಕಾರ್ಯಕರ್ತರ ಕೊಲೆ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ನಂತರ ಸಿಎಂ ಬದಲಾವಣೆ ಮಾಡುವ ಕುರಿತು ಹೆಚ್ಚಿನ ಚರ್ಚೆಯನ್ನು ಬಿಜೆಪಿಯ ದೆಹಲಿ ನಾಯಕರು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.