ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಅಗಸ್ಟ್ 9 ರಂದು ವಿಸ್ತರಣೆಯಾಗುವ ಸಾಧ್ಯತೆಯಿದೆ. ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಬಿ. ಶ್ರೀರಾಮುಲು ಸೇರಿದಂತೆ 12ರಿಂದ 15 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ಮೊದಲ ಹಂತದಲ್ಲಿ 15 ಸಚಿವ ಸ್ಥಾನ, 30 ನಿಗಮ ಮಂಡಳಿ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಸಚಿವರಾಗುವವರ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ, ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಇದ್ದಾರೆ. ಶಾಸಕತ್ವ ಅನರ್ಹಗೊಂಡಿರುವವರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಪೂರಕವಾಗಿ ಇತ್ಯರ್ಥವಾದರೆ ಹೆಚ್. ವಿಶ್ವನಾಥ್, ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್ ಸಚಿವರಾಗಲಿದ್ದಾರೆ. ಒಂದು ವೇಳೆ ಶಾಸಕತ್ವದಿಂದ ಅನರ್ಹಗೊಂಡವರ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗದೆ ಇದ್ದರೆ ಬಿಜೆಪಿಯ ಶಾಸಕರು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಜುಲೈ 26ರಂದು ಪ್ರಮಾಣವಚನ ಸ್ವೀಕರಿಸಿದ್ದಲ್ಲದೆ, ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಜುಲೈ 29ರಂದು ಸಾಬೀತುಪಡಿಸಿದ್ದರು. ಇದಾದ ನಂತರ ಅಧಿಕಾರಿಗಳೊಂದಿಗೆ ಸಚಿವ ಸಂಪುಟ ಸಭೆ ಸೇರಿದಂತೆ, ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು, ಸಹಜವಾಗಿಯೇ ಸಂಪುಟ ವಿಸ್ತರಣೆಯಿಲ್ಲದೆ ಹೆಜ್ಜೆ ಇಡುತ್ತಿರುವುದು ಟೀಕೆಗೆ ಕಾರಣವಾಗಿದೆ.
ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದ ಲಾಬಿ ನಡೆಯುತ್ತಿದೆಯಾದರೂ, ಬಿಜೆಪಿ ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿರುವುದರಿಂದ ಯಾರೂ ಬಹಿರಂಗವಾಗಿ ಚಟುವಟಿಕೆ ನಡೆಸುತ್ತಿಲ್ಲ. ಆದರೂ ಹೈಕಮಾಂಡ್ ಮತ್ತು ಸಂಘ ಪರಿವಾರದ ನಾಯಕರ ಬಳಿ ಸಚಿವ ಸ್ಥಾನಕ್ಕಾಗಿ ಒಂದು ಮಟ್ಟದಲ್ಲಿ ಪ್ರಮುಖ ನಾಯಕರು ಲಾಬಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಬ್ರಾಹ್ಮಣರ ಕೋಟಾದಡಿ ಸುರೇಶ್ ಕುಮಾರ್ ಇಲ್ಲವೇ ರವಿ ಸುಬ್ರಮಣ್ಯ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಇದೇ ರೀತಿ ದಾವಣಗೆರೆ ಜಿಲ್ಲೆಯಿಂದ ಸಚಿವರಾಗಲು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಎಂ.ಪಿ. ರವೀಂದ್ರನಾಥ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.