ಬೆಂಗಳೂರು: ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿ 1,093 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‍ಪಿಒ) ರಚಿಸಲಾಗಿದೆ. ಎಫ್‍ಪಿಒಗಳಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳಿಂದ ಒಟ್ಟು ಸುಮಾರು 80 ಲಕ್ಷ ರೂಪಾಯಿ ನೀಡಲಾಗುತ್ತಿದೆ. ರೈತರ ವಾರ್ಷಿಕ ಆದಾಯ ದುಪ್ಪಟ್ಟುಗೊಳಿಸಲು ಪ್ರಧಾನಿಯವರು ದೃಢಸಂಕಲ್ಪ ಮಾಡಿದ್ದು, ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ಇರುವ ಮಾರುಕಟ್ಟೆ ಅವಕಾಶಗಳು ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿ ಮತ್ತು ರಾಜ್ಯದ ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು 4 ಸಾವಿರ ರೂಪಾಯಿ ನೆರವನ್ನು ಖಾತೆಗೆ ಜಮಾ ಮಾಡುತ್ತಿವೆ ಎಂದರು.
ಕುರಿ, ಮೇಕೆ, ಕೋಳಿ, ಮೀನು ಸಾಕಣೆಗೆ 87 ಲಕ್ಷ ರೂ. ಸಾಲ ನೀಡಿ ಅದರಲ್ಲಿ 50 ಲಕ್ಷ ರೂಪಾಯಿ ಸಬ್ಸಿಡಿ ಕೊಡುವ ಯೋಜನೆ ಜಾರಿಯಲ್ಲಿದೆ. ಕೃಷಿಗೆ ಆದ್ಯತೆ ಕೊಡುವ ಅದ್ಭುತ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರೈತರಿಗಾಗಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ರೈತರ ಉತ್ಪನ್ನ ಶೇಖರಣೆಗೆ ಜಿಲ್ಲೆಗೊಂದು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ರೈತ ಸಮುದಾಯದ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಲು ಉತ್ಪಾದಕರಿಗಾಗಿ ಬ್ಯಾಂಕ್ ನಿರ್ಮಿಸಿದ್ದು, ಇವೆರಡು ಯೋಜನೆಗಳೂ ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗಿವೆ. ಹಾಲಿಗೆ ಯಡಿಯೂರಪ್ಪ ಅವರ ಸರ್ಕಾರ 4 ರೂಪಾಯಿ ಬೆಂಬಲ ಬೆಲೆ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿದೆ ಎಂದು ವಿವರಿಸಿದರು.