ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದರೂ ಸಂಪುಟ ವಿಸ್ತರಣೆಗೆ ಮಾತ್ರ ತೆರೆ ಬಿದ್ದಿಲ್ಲ. ವಿಷಯ ಚರ್ಚೆಗೆ ಬಂದರೂ ದೆಹಲಿಗೆ ತೆರಳಿ ನಂತರ ಸಂದೇಶ ಕಳುಹಿಸಿಕೊಡುವ ಭರವಸೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ತೃಪ್ತಿಪಡಬೇಕಾಗಿದೆ.
ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭಾಗವಹಿಸಿದ್ದರಿಂದ ಅಲ್ಲಿಯೇ ಸಂಪುಟ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ ಎನ್ನುವ ಸಿಎಂ ಬೊಮ್ಮಾಯಿ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಯಾವುದೇ ಸ್ಪಷ್ಟ ಭರವಸೆ ನೀಡದೆ ಜೆ ಪಿ ನಡ್ಡಾ ನವದೆಹಲಿಗೆ ವಾಪಸಾಗಿದ್ದಾರೆ.
ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಜೆ ಪಿ ನಡ್ಡಾ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಈಶ್ವರಪ್ಪ ರಾಜೀನಾಮೆಯಿಂದ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಆದಂತಾಗಿದ್ದು, ಅವುಗಳ ಭರ್ತಿಗೆ ಅನುಮತಿ ನೀಡುವಂತೆ ನಡ್ಡಾಗೆ ಸಿಎಂ ಮನವಿ ಮಾಡಿದ್ದಾರೆ. ಆದರೆ ಆಕಾಂಕ್ಷಿಗಳ ಸಂಖ್ಯೆ ಎರಡು ಡಜನ್ ದಾಟಿದ್ದು, ದೆಹಲಿ ಪರೇಡ್ ಮಾಡುತ್ತಿರುವವರ ಸಂಖ್ಯೆಯೇ ಡಜನ್ ದಾಟಿದೆ. ಹಾಗಾಗಿ ತಕ್ಷಣಕ್ಕೆ ಯಾವ ನಿರ್ಧಾರ ಕೈಗೊಳ್ಳಬೇಡಿ ಎಂದು ನಡ್ಡಾ ಸೂಚನೆ ನೀಡಿ, ಬಳಿಕ ದೆಹಲಿಗೆ ತೆರಳಿ ಸಂದೇಶ ಕಳುಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ.