ಬೆಂಗಳೂರು :ಸ್ಥಳೀಯ ಸಂಸ್ಥೆಗಳಿಂದ ಚುನಾಯಿಸಲ್ಪಡುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಲವು ರೀತಿಯ ವಾಮ ಮಾರ್ಗದ ಮುಖಾಂತರ ಮತ ಹಾಕಿಸುವ ಕುರಿತು ತಯಾರಿ ನಡೆಯುತ್ತಿರುವ ವಿಷಯ ಕೇಳಿ ಬರುತ್ತಿದೆ. ತಪ್ಪು ದಾರಿಗಳ ಮೂಲಕ ಸುಮಾರು 900ಕ್ಕೂ ಹೆಚ್ಚು ಮತಗಳನ್ನು ಹಾಕಿಸುವ ಪ್ರಯತ್ನ ಮಡುತ್ತಿದ್ದಾರೆಂದು ಖಚಿತವಾಗಿ ತಿಳಿದು ಬಂದಿದೆ. ಆದ್ದರಿಂದ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ರಾಜ್ಯ ಬಿಜೆಪಿಯಿಂದ ಇಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೃಪತುಂಗ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಕಾನೂನು ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರ ನಿಯೋಗವು ಚುನಾವಣಾ ಅಕ್ರಮ ಸಾಧ್ಯತೆ ಕುರಿತು ದೂರು ಸಲ್ಲಿಸಿತು.
ಅನಕ್ಷರಸ್ಥರಂತೆ ನಟಿಸಿ ಇನ್ನೊಬ್ಬರಿಂದ ಮತದಾನ : ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಸುನೀಲ್‍ಗೌಡ ಎಂಬಾತನು ತರಬೇತಿಯನ್ನು ಕೊಡುತ್ತಿರುವ ಮಾಹಿತಿ ಲಭ್ಯವಾಗಿದೆ. ಅನಕ್ಷರಸ್ಥರಂತೆ ನಟಿಸಿ ನಮಗೆ ವಿದ್ಯೆಯಿಲ್ಲ, ಹಾಗಾಗಿ ನಮಗೆ ಮತ ಹಾಕಲು ಸಹಾಯಕರನ್ನು ಕಳುಹಿಸಿ ಎಂದು ಕೇಳುವುದು, ಅವರ ಜೊತೆಗೆ ಒಳಗೆ ಹೋಗಿ ಅಂಥವರಿಂದ ತಮಗೆ ಬೇಕಾದ ಅಭ್ಯರ್ಥಿಗೆ ಮತ ಹಾಕಿಸುವ ಹುನ್ನಾರ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ದಿವ್ಯಾಂಗರ ಬದಲು ಮತದಾನ ಮಾಡುವುದು : ಅಲ್ಲದೆ, ದಿವ್ಯಾಂಗರಿಗೆ ಓಡಾಡಲು ಆಗುವುದಿಲ್ಲ, ಕೈಗಳು ನಡುಗುತ್ತವೆ, ಮತ ಹಾಕಲು ಸಾಧ್ಯವಿಲ್ಲ. ಹಾಗಾಗಿ ಇವರಿಗೆ ಮತ ಹಾಕಲು ಸಹಾಯಕರನ್ನು ಕೊಡಬೇಕು ಎಂದು ಹೇಳಿ ಅಂತಹವರಿಂದ ತಮ್ಮ ಅಭ್ಯರ್ಥಿಗೆ ಮತ ಹಾಕಿಸುವುದು. ಕುರುಡರಂತೆ ನಟಿಸಿ, ಕಣ್ಣು ಕಾಣುವುದಿಲ್ಲ, ಸಹಾಯಕರನ್ನು ಕೊಡಿ ಎಂದು ಅವರಿಂದ ತಮ್ಮ ಅಭ್ಯರ್ಥಿಗೆ ಮತ ಹಾಕಿಸುವುದು ಹಾಗೂ ಒಳಗೆ ಕುಳಿತಿರುವ ಚುನಾವಣಾ ಅಧಿಕಾರಿಗಳನ್ನು ತಮ್ಮ ದರ್ಪದಿಂದ ಹೆದರಿಸಿ ಇಂತಹ ಕೆಲಸ ಮಾಡಿಸುವ ಪ್ರಯತ್ನವೂ ಆರಂಭಗೊಂಡಿರುವ ಕುರಿತು ಮಾಹಿತಿಗಳು ಬರುತ್ತಿವೆ ಎಂದು ಆಯೋಗಕ್ಕೆ ತಿಳಿಸಿದ್ದೇವೆ ಎಂದರು.
ಮತದಾರರ ದಾರಿ ತಪ್ಪಿಸುವುದು : ಈ ತರಹದ ಸಂಗತಿಗಳು ಕನಕಪುರ ಪ್ರದೇಶ ಹಾಗೂ ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ಆಗಬಹುದಾದ ಸಂಭವವಿದೆ. ನಿಜವಾದ ಮತದಾರನ ಪರವಾಗಿ ಅವನಂತೆ ಹೋಲುವ ಬೇರೆ ನಕಲಿ ಜನರಿಂದ ಮತ ಹಾಕಿಸುವ ಸಾಧ್ಯತೆಯಿದೆ. ಮತಪತ್ರದ ಮೇಲೆ ತನಗೆ ಮತ ಹಾಕಿದ್ದರ ಬಗ್ಗೆ ಸಂಕೇತ ಚಿಹ್ನೆ ಹಾಕಲಿಕ್ಕೆ ಹೇಳುವುದು. ತಮಗೆ ಮತ ಹಾಕದೆ ಇರುವ ಮತದಾರರನ್ನು ಗುರುತಿಸಿ, ಅಂತಹವರು ಸಮಯಕ್ಕೆ ಸರಿಯಾಗಿ ಬಂದು ಮತ ಹಾಕಲು ಸಾಧ್ಯವಾಗದಂತೆ ಮಾಡುವುದು, ಮಹಿಳಾ ಮತದಾರರೊಟ್ಟಿಗೆ ಅವರಿಗೆ ತಿಳಿಯುವುದಿಲ್ಲ ಎಂಬ ನೆಪವೊಡ್ಡಿ ಅವಳ ಗಂಡ ಮತ ಕೇಂದ್ರದೊಳಗೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.
ಕೆಜಿಎಫ್ ಬಾಬು ನಾಮಪತ್ರ ಅಸಿಂಧುಗೊಳಿಸಿ :ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ಅವರಿಂದ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಆಗಿದೆ. ಇದನ್ನು ಪರಿಗಣಿಸಿ ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಲು ಆಗ್ರಹಿಸುವ ಮನವಿಯನ್ನು ರಾಜ್ಯ ಬಿಜೆಪಿ ವತಿಯಿಂದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ರವಿಕುಮಾರ್ ಮಾಹಿತಿ ನೀಡಿದರು.
ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯರಿಂದ ಚುನಾಯಿಸಲ್ಪಡುವ ವಿಧಾನಪರಿಷತ್ ಅಭ್ಯರ್ಥಿಯಾದ ಯೂಸುಫ್ ಷರೀಫ್ ಬಾಬು ಅವರು ಇಂದಿನ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದ್ದು, ಅದರ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯು ಪ್ರತಿಯೊಬ್ಬ ಸದಸ್ಯರಿಗೆ ಕುಡಿಯಲಿಕ್ಕೆ ಯಾವ ರೀತಿ ಹಣ ಕೊಡುತ್ತೇವೆ ಎಂಬುದನ್ನು ಹೇಳಿದ್ದಾರೆ. ದಿ. 01.11.2021ರಂದೂ ಸಹ ಈ ಅಭ್ಯರ್ಥಿಯ ಮೇಲೆ ಭಾರತೀಯ ಜನತಾ ಪಾರ್ಟಿ ನೀತಿಸಂಹಿತೆ ಉಲ್ಲಂಘನೆ ಕುರಿತ ದೂರು ಕೊಡಲಾಗಿತ್ತು. ಆದರೆ ಅವರ ಪ್ರಚಾರ ನಿರಂತರ ಇದೇ ರೀತಿಯಲ್ಲಿ ಮುಂದುವರೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ದಿ. 09.10.2021ರಂದು ಕೊಡುವ ಎಲ್ಲಾ ಚುನಾವಣಾ ಜಾಹೀರಾತು ಚುನಾವಣಾ ಆಯೋಗದ ನೀತಿಸಂಹಿತೆ ಸಮಿತಿಯ (ಎಂಸಿಎಂಸಿ) ಅನುಮತಿ ಪಡೆಯಬೇಕು ಎಂಬ ನಿಯಮವಿದ್ದರೂ, ಯಾವ ಆಧಾರದ ಮೇಲೆ ಇದು ಸಮರ್ಥನೀಯ ಎಂದು ಚುನಾವಣಾ ಆಯೋಗ ಅನುಮತಿ ಕೊಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ದೂರು ಕುರಿತು ಎಲ್ಲ ಅಂಶಗಳನ್ನು ಪರಿಶೀಲಿಸಿ ಯೂಸುಫ್ ಷರೀಫ್ ಬಾಬು (ಕೆ.ಜಿ.ಎಫ್ ಬಾಬು) ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಬೇಕು ಎಂದು ಅಗ್ರಹಿಸಿದರು.