ಬೆಂಗಳೂರು: ಇಂದು ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಬಗ್ಗೆ ಚರ್ಚೆ ನಡೆಸುತ್ತೇವೆ. ಪಟ್ಟಿ ಅಂತಿಮಗೊಳಿಸಿ, ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡುತ್ತೇವೆ. ಹೈಕಮಾಂಡ್ ಅಭ್ಯರ್ಥಿಗಳನ್ನು ಫೈನಲ್ ಮಾಡಲಿದೆ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಅದು ಕಾಂಗ್ರೆಸ್ ಚಿಂತನ ಸಮ್ಮೇಳನ : ರಾಜಸ್ಥಾನಲ್ಲಿ ನಡೆಯುತ್ತಿರುವುದು ಚಿಂತನ ಶಿಬಿರ ಅಲ್ಲ, ಅದು ಕಾಂಗ್ರೆಸ್ ಚಿಂತನ ಸಮ್ಮೇಳನ. 50 ಜನ ಇರುವುದು ಚಿಂತನ ಮಂಥನ ಬೈಟಕ್. ಆದರೆ, ಇದರಲ್ಲಿ 400 ಜನ ಸೇರಿದ್ದಾರೆ. ಹೀಗಾಗಿ, ಅದು ಚಿಂತನ ಶಿಬಿರವಲ್ಲ, ಚಿಂತನ ಸಮ್ಮೇಳನ ಎಂದರು.
ಅಭ್ಯರ್ಥಿಗಳ ಆಯ್ಕೆಗೆ ಸಿಎಂ ಕಸರತ್ತು :ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಕಸರತ್ತು ಜೋರಾಗಿದೆ. ಈ ಸಂಬಂಧ ನಿನ್ನೆಯಿಂದಲೂ ಹಲವರ ಜತೆ ಭೇಟಿ, ಕರೆ ಮೂಲಕ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಎರಡು ಸಲ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.