ಬೆಂಗಳೂರು: ಪದಾಧಿಕಾರಿಗಳ ಸಭೆ, ಬಿಬಿಎಂಪಿ ಚುನಾವಣೆ ಪೂರ್ವಸಿದ್ಧತಾ ಸಭೆ ನಂತರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಪರಿಷತ್ ಚುನಾವಣೆ ಸಿದ್ಧತೆ, ಬಿಟ್ ಕಾಯಿನ್ ಆರೋಪ, ನಿಗಮ ಮಂಡಳಿಗೆ ಹೊಸದಾಗಿ ನೇಮಕ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಸಭೆ ನಡೆಯಿತು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.
ಉಪ ಚುನಾವಣಾ ಸೋಲು, ಗೆಲುವಿನ ಕುರಿತು ಅವಲೋಕನ, ಘೋಷಣೆಯಾಗಿರುವ ಪರಿಷತ್ ಚುನಾವಣೆ ಕುರಿತು ಅಭ್ಯರ್ಥಿ ಆಯ್ಕೆ ಸೇರಿದಂತೆ ಚುನಾವಣೆಗೆ ನಡೆಸಬೇಕಿರುವ ತಯಾರಿ ಕುರಿತು ಸಮಾಲೋಚನೆ ನಡೆಸಲಾಯಿತು. ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿರುವ ಬಿಟ್ ಕಾಯಿನ್ ವಿವಾದದ ಕುರಿತು ಪ್ರಸ್ತಾಪವಾಯಿತು. ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಬೇಕು, ವಿವಾದ ಸರ್ಕಾರದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು ಎಂದು ಚರ್ಚಿಸಲಾಯಿತು. ಇದೇ ವೇಳೆ ನಿಗಮ ಮಂಡಳಿಗಳಿಗೆ ಹೊಸದಾಗಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಪ್ರಸ್ತಾಪದ ಕುರಿತು ಸಮಾಲೋಚನೆ ನಡೆಸಲಾಗಿದೆ ಎನ್ನಲಾಗಿದೆ.