ಬೆಂಗಳೂರು :ಐಎಂಎ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಟ್ವೀಟ್ ವಾರ್ ನಡೆದಿದೆ. ಆರೋಪ ಪ್ರತ್ಯಾರೋಪಗಳನ್ನು ಉಭಯ ಪಕ್ಷಗಳು ಪಟ್ಟಿ ಮಾಡಿ ಬಿಡುಗಡೆ ಮಾಡುತ್ತಿವೆ.
ಟ್ವೀಟ್ ಮೂಲಕ ಹಗರಣವನ್ನು ಪ್ರಸ್ತಾಪಿಸಿದ್ದ ಬಿಜೆಪಿ, ಐಎಂಎ ಹಗರಣ ರಾಜ್ಯ ಕಾಂಗ್ರೆಸ್ ಪಕ್ಷದ ಕೃಪಾಕಟಾಕ್ಷದಿಂದಲೇ ನಡೆದಿದೆ. ಜನಸಾಮಾನ್ಯರು ಬೆವರು ಸುರಿಸಿ ದುಡಿದ ದುಡ್ಡನ್ನು ಕಾಂಗ್ರೆಸ್ ನಾಯಕರು ಲಂಚದ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್, ಆರ್ ವಿ ದೇಶಪಾಂಡೆ ಹಾಗೂ ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ಸಿಗರೇ, ಜನರ ದುಡ್ಡಿಗೆ ಲೆಕ್ಕ ನೀಡುವಿರಾ !? ಎಂದು ಕೇಳಿದೆ.
ಇದಕ್ಕೆ ಟ್ವೀಟ್ ಮೂಲಕ ಉತ್ತರ ನೀಡಿರುವ ಕಾಂಗ್ರೆಸ್, ಶಿವಮೊಗ್ಗ ಅಕ್ರಮ ಕಲ್ಲುಗಣಿಗಾರಿಕೆಯ ಸ್ಫೋಟ. ಶೃಂಗೇರಿ ಬಾಲಕಿಯ ಅತ್ಯಾಚಾರ. ಪ್ರಶ್ನೆಪತ್ರಿಕೆ ಸೋರಿಕೆ ಹಗರಣ. ರಾಜ್ಯದಲ್ಲಿ ಹಬ್ಬಿರುವ ಡ್ರಗ್ಸ್ ಜಾಲ. ಎಲ್ಲವೂ ಬಿಜೆಪಿ ಅಂಕೆಯಲ್ಲೇ ನಡೆದಿವೆ. ಇಲ್ಲದ ಕತೆ ಕಟ್ಟುವ ಈ ನೀಚ ಕೆಲಸಗಳನ್ನ ಯಾವಾಗ ಬಿಡುತ್ತೀರಿ ಹೇಳಿ ರಾಜ್ಯ ಬಿಜೆಪಿ ನಾಯಕರೇ? ಎಂದು ಪ್ರಶ್ನೆ ಹಾಕಿದೆ.
ಇನ್ನು, ಮತ್ತೊಂದು ಟ್ವೀಟ್ ಮೂಲಕ ತನ್ನ ವಾದ ಮುಂದುವರಿಸಿರುವ ಬಿಜೆಪಿ, ಐಎಂಎ ಹಗರಣದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರು ಭಾಗಿಯಾಗಿದ್ದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ₹5 ಕೋಟಿ ಸಂದಾಯವಾಗಿದೆ ಎಂದು ವರದಿಗಳು ಹೇಳುತ್ತಿವೆ. ಈ ಕ್ಷಣದಲ್ಲೇ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡುವರೇ? ಎಂದು ಕೇಳಿದೆ.
ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟುಕೊಂಡ ಕಲ್ಪಿತ ವರದಿಗಳನ್ನ ಹಿಡಿದು ಬರುವ ರಾಜ್ಯ ಬಿಜೆಪಿ ಪಕ್ಷ ಡಿನೋಟಿಫಿಕೇಷನ್ ಹಗರಣದಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ 'ನೀವೇ ಸಿಎಂ, ನಿಮ್ಮನ್ಯಾರು ತನಿಖೆ ಮಾಡುತ್ತಾರೆ" ಎಂದು ಕೇಳಿದೆ, ಮೊದಲು ಅವರು ರಾಜೀನಾಮೆ ನೀಡಿ ತನಿಖೆಗೆ ಒಳಪಡುವುದು ಯಾವಾಗ? ಹಾಗೆಯೇ ಕೆ ಎಸ್ ಈಶ್ವರಪ್ಪ ಕೂಡ ಎಂದು ತಿಳಿಸಿದೆ.
ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್
ಐಎಂಎ ಹಗರಣದ ತನಿಖೆ ಪ್ರಗತಿಯಲ್ಲಿರುವ ಸಂದರ್ಭ ಎರಡು ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವ ಮೂಲಕ ಹಗರಣದ ವಿಚಾರ ಜನರ ಮನಸ್ಸಿನಲ್ಲಿ ಮತ್ತೆ ನೆನಪಾಗುವಂತೆ ಮಾಡಿವೆ.