ಬೆಂಗಳೂರು:ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಅಕ್ಟೋಬರ್ 10 ರಿಂದ ಆರಂಭಗೊಳ್ಳುತ್ತಿದ್ದು, ಅದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ಹಿಂದೆ ಅಧಿವೇಶನ ನಡೆದಿತ್ತಾದರೂ ಅದರು ಸಿಎಂ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಸೀಮಿತವಾದ ಅಧಿವೇಶನವಾಗಿತ್ತು.
ಅಧಿವೇಶನಕ್ಕೂ ಮೊದಲು ಶಾಸಕಾಂಗ ಸಭೆ ಕರೆದ ಬಿಜೆಪಿ: ಪ್ರತಿಪಕ್ಷಗಳನ್ನು ಎದುರಿಸಲು ಸಜ್ಜು - ನೆರೆಹಾನಿ ಪರಿಹಾರ ವಿಷಯ
ಅಕ್ಟೋಬರ್ 9 ರಂದು ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಂದು ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಸಲಾಗುತ್ತದೆ.
ಈಗ ಮೂರು ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು, ನೆರೆಹಾನಿ ಪರಿಹಾರ ವಿಷಯ ಸದನದಲ್ಲಿ ಪ್ರತಿಧ್ವನಿಸಲಿದೆ. ಹಾಗಾಗಿ ಅದನ್ನು ಎದುರಿಸುವ ಹಾಗೂ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಕುರಿತು ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಬಾರಿಯ ಚಳಿಗಾಲದ ಅಧಿವೇಶನವು ಬೆಳಗಾವಿಯ ಬದಲಿಗೆ ಬೆಂಗಳೂರಲ್ಲೇ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಬಂದ ನೆರೆಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು ಪ್ರತಿಭಟನೆಯ ಭಯದಿಂದ ಈ ಅಧಿವೇಶನವನ್ನು ವಿಧಾನಸೌಧಕ್ಕೆ ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅಲ್ಲದೇ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.