ಬೆಂಗಳೂರು: ಮೂರು ದಿನಗಳ ನಂತರ ಕಡೆಗೂ ಸರ್ಕಾರ ರಚನೆಗೆ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕಾದು ಕುಳಿತಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಡೆಗೂ ದೆಹಲಿ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ರಾಜಭವನಕ್ಕೆ ತೆರಳಿದ ಯಡಿಯೂರಪ್ಪ ಬೆಳಗ್ಗೆ 9 ಗಂಟೆಗೆ ದೂರವಾಣಿ ಕರೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸರ್ಕಾರ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹೈಕಮಾಂಡ್ ಸಮ್ಮತಿ ಸಿಗುತ್ತಿದ್ದಂತೆ ತರಾತುರಿಯಲ್ಲಿಯೇ ರಾಜ್ಯಪಾಲರ ಕಚೇರಿಗೆ ಧಾವಿಸಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರ ಸಮ್ಮತಿ ಪಡೆದಿರುವ ಯಡಿಯೂರಪ್ಪ ಇಂದು ಸಂಜೆ 6 ರಿಂದ 6.15 ರ ವೇಳೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ
ಕಡೆಯ ಆಷಾಢ ಶುಕ್ರವಾರದ ಶುಭ ದಿನವಾದ ಇಂದು ಸಂಜೆ ಬಿಎಸ್ವೈ ರಾಜಭವನದ ಗಾಜಿನ ಮನೆಯಲ್ಲಿ ಸರಳವಾಗಿ ನಡೆಯುವ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಯಾವುದೇ ಪೂರ್ವ ಸಿದ್ಧತೆ ನಡೆಸದೇ ಏಕಾಏಕಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದು ಇಷ್ಟು ತರಾತುರಿಯಲ್ಲಿ ಪ್ರಮಾಣವಚನ ಇದೇ ಮೊದಲ ಎನ್ನಲಾಗುತ್ತಿದೆ. ಅಲ್ಲದೇ ಇಂದು ಯಡಿಯೂರಪ್ಪ ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಹುಮತ ಸಾಬೀತುಪಡಿಸಿದ ನಂತರ ಸಂಪುಟ ರಚನೆ ಮಾಡಲಿದ್ದಾರೆ ಎನ್ನಲಾಗಿದೆ.
ಜುಲೈ 31 ರ ಒಳಗೆ ಹಣಕಾಸು ವಿಧೇಯಕಕ್ಕೆ ವಿಧಾನಸಭೆಯ ಎರಡೂ ಸದನ ಗಳು ಒಪ್ಪಿಗೆ ನೀಡಿ ರಾಜ್ಯಪಾಲರಿಂದ ಸಹಿ ಒಡೆಯಬೇಕು. ಇಲ್ಲದೇ ಇದ್ದಲ್ಲಿ ಆಗಸ್ಟ್ ತಿಂಗಳಲ್ಲಿ ಖಜಾನೆಯಿಂದ ಹಣ ಬಳಕೆಗೆ ನಿರ್ಬಂಧ ಬೀಳಲಿದೆ, ಆಡಳಿತ ಯಂತ್ರ ಸ್ಥಗಿತಗೊಳ್ಳಲಿದೆ, ಸರ್ಕಾರಿ ನೌಕರರ ವೇತನ ಪಾವತಿಯೂ ಸಾಧ್ಯವಾಗುವುದಿಲ್ಲ ಇದಕ್ಕೆ ಬಿಜೆಪಿಯೇ ಹೊಣೆಯಾಗಬೇಕಾಗಲಿದೆ, ಅಧಿವೇಶನದಲ್ಲಿ ಈ ಬಿಲ್ ಮಂಡನೆಗೆ ಬಿಜೆಪಿ ಒಪ್ಪಿಗೆ ನೀಡಿರಲಿಲ್ಲ ಈಗ ತಿಂಗಳಾಂತ್ಯಕ್ಕೆ ಸದನ ನಡೆಸಿ ಬಿಲ್ ಪಾಸ್ ಮಾಡಿಸದೇ ಇದ್ದಲ್ಲಿ ಅದರ ಹೊಣೆ ಪಕ್ಷವೇ ಹೊರಬೇಕಾಗಲಿದೆ ಎನ್ನುವ ಕಾರಣಕ್ಕೆ ಮತ್ತಷ್ಟು ವಿಳಂಬ ಮಾಡುವುದು ಬೇಡ ಎಂದು ಹೈಕಮಾಂಡ್ ಸರ್ಕಾರ ರಚನೆಗೆ ಅನುಮತಿ ನೀಡಿತು ಎನ್ನಲಾಗಿದೆ.