ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ರಾಜ್ಯ ಬಜೆಟ್ಗೆ ಸದನದ ಒಪ್ಪಿಗೆ ಸಿಗಲಿದೆ. ಆಯವ್ಯಯದ ಬಿಲ್ಗಳು ಪಾಸ್ ಆಗಲಿವೆ. ಈ ಸರ್ಕಾರವೂ ಮುಂದುವರೆಯಲಿದೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲ ವಿರೋಧಿಸಿ ನಗರದ ಆನದಂರಾವ್ ವೃತ್ತದ ಸಮೀಪವಿರುವ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಇಂತಹ ಕೆಲಸಕ್ಕೆ ಮುಂದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಮುನ್ನಡೆಸಲು ಸಂಖ್ಯಾಬಲ ಮುಖ್ಯವಾಗಿದೆ. ಅಗತ್ಯ ಸಂಖ್ಯಾಬಲ ನಮಗಿದೆ. ಆದರೂ ಬಿಜೆಪಿಯವರು ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಲ್ಲ ಎಂದರು.
ಆಪರೇಷನ್ ಕಮಲದ ಪ್ರಯತ್ನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದ್ದಾರೆ. ಅವರ ಕುಮ್ಮಕ್ಕಿನಿಂದಲೇ ಯಡಿಯೂರಪ್ಪನವರು ಹೀಗೆಲ್ಲ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಯಶಸ್ವಿಯಾಗಲ್ಲ. ಬಹುಮತವಿರುವ ಸರ್ಕಾರ ಬಜೆಟ್ ಮಂಡಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಬಹಿಷ್ಕರಿಸಿ ಬಿಜೆಪಿಯವರು ಹೊರನಡೆಯುವ ಮೂಲಕ ತಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ ಎಂದು ತೋರಿಸಿದ್ದಾರೆ. ಅವರು ಏನೇ ಮಾಡಿದರೂ ನಮ್ಮ ಸರ್ಕಾರ ಸುಭದ್ರವಾಗಿರಲಿದೆ ಎಂದರು.