ಬೆಂಗಳೂರು: ಯಶವಂತಪುರ ಉಪಸಮರದ ಅಖಾಡದಲ್ಲಿ ಚುನಾವಣಾ ಕಾವು ರಂಗೇರಿದೆ. ಇಂದು ಬಿಜೆಪಿ ತನ್ನ ಘಟಾನುಘಟಿ ನಾಯಕರನ್ನು ಪ್ರಚಾರದ ಕಣಕ್ಕಿಳಿಸಿದರೆ, ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಕುಮಾರಸ್ವಾಮಿಯವರೇ ಅಖಾಡಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿಯ ನೀರಸ ಪ್ರಚಾರ ಮುಂದುವರೆದಿದೆ.
ಯಶವಂತಪುರ ಉಪಚುನಾವಣೆ ಪ್ರಚಾರ ಹೌದು, ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಪರ ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಆರ್. ಅಶೋಕ್ ಮತಯಾಚನೆ ನಡೆಸಿದರು. ವಿಶೇಷ ಅಂದ್ರೆ, 2ನೆ ದಿನವೂ ಟಿಕೆಟ್ ವಂಚನೆಯಿಂದ ಬೇಸರಗೊಂಡಿದ್ದ ಚಿತ್ರನಟ ಜಗ್ಗೇಶ್ ಕೂಡ ಪ್ರಚಾರಕ್ಕೆ ಧ್ವನಿಗೂಡಿಸಿದರು. ಅತ್ತ ಜೆಡಿಎಸ್ ಉಪಸಮರದಲ್ಲಿ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆನೆ ಅಭ್ಯರ್ಥಿ ಜವರಾಯಿಗೌಡರಿಗೆ ಪ್ರಚಾರದಲ್ಲಿ ಸಾಥ್ ನೀಡಿದರು.
ರಣಕಣದಲ್ಲಿ ಎಸ್.ಟಿ.ಸೋಮಶೇಖರ್ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಪರಸ್ಪರ ವಾಕ್ ಸಮರ ಜೋರಾಗಿತ್ತು. ಎಸ್.ಟಿ.ಸೋಮಶೇಖರ್ ಚಿತ್ರ ನಟಿಯೊಬ್ಬರು ಅಶೋಕಾ ಹೋಟೆಲ್ನಲ್ಲಿ ಬಿಡಿಎ ಗೆ ಸಂಬಂಧಿಸಿದ ಕಡತವೊಂದಕ್ಕೆ ಸಹಿ ಹಾಕಿಸುತ್ತಿದ್ದರು ಎಂದು ಎಚ್ಡಿಕೆ ವಿರುದ್ಧ ಪರೋಕ್ಷ ಆರೋಪ ಮಾಡಿದರು.
ಈ ಆರೋಪದಿಂದ ಕೆಂಡಾಂಮಡಲರಾದ ಎಚ್.ಡಿ ಕುಮಾರಸ್ವಾಮಿ, ಎಸ್.ಟಿ.ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮಶೇಖರ್ಗೆ ಬುದ್ದಿ ಭ್ರಮಣೆಯಾಗಿದೆ. ನೀವು ಮಾಡಿರುವ ಕೆಟ್ಟ ಕೆಲಸಕ್ಕೆ ನನ್ನನ್ನ ಯಾಕೆ ಎಳೆದು ತರುತ್ತೀರಿ. ಬಿಡಿಎಗೆ ಕುರಿತಂತೆ ಒಂದೇ ಒಂದು ಫೈಲ್ ನನ್ನ ಬಳಿ ಬಂದಿಲ್ಲ. ಈ ಕುರಿತಂತೆ ಚರ್ಚೆಗೆ ನಾನು ಸಿದ್ದನಿದ್ದೇನೆ. ಸೋಮಶೇಖರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಎಸ್ . ಟಿ ಸೋಮಶೇಖರ್ ಕ್ಷೇತ್ರದ ಅನುದಾನದ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಮಾತಿಗೆ ಪ್ರತಿಕ್ರಿಯೆ ನೀಡಿದ ಕಮಲ ಅಭ್ಯರ್ಥಿ ಎಸ್.ಟಿ ಸೋಮಶೇಖರ್ , ನಾನು ಮುಖ್ಯಮಂತ್ರಿ ಹೆಸರನ್ನ ಹೇಳಿದ್ನಾ, ಆವಾಗ ರಾಕೇಶ್ ಸಿಂಗ್, ಅಶೋಕ್ ಹೋಟಲ್‌ನಲ್ಲಿ ಸಹಿ ಮಾಡಿಸಿದನ್ನ ಹೇಳಿದೆ. ಆಗಾಲೇ ಅದನ್ನ ನಾನು ಡಿಸಿಎಂ ಗಮನಕ್ಕೆ ತಂದಿದ್ದೆ. ಮಾಧ್ಯಮದ ಮೂಲಕ ಸಿಎಂ ಗಮನಕ್ಕೂ ತಂದಿದ್ದೆ. ನಾನು ಸಿಎಂ ಸಹಿ ಹಾಕಿದ್ರು ಅಂತ ಎಲ್ಲೂ ಹೇಳಿಲ್ಲ. ನನಗೆ ಯಾವುದೇ ರೀತಿಯ ಬುದ್ದಿ ಭ್ರಮಣೆಯಾಗಿಲ್ಲ, ನನಗೆ ಬುದ್ದಿ ಚೆನ್ನಾಗೆ ಇದೆ ಎಂದು ಮಾಜಿ ಸಿಎಂಗೆ ತೀರುಗೇಟು ನೀಡಿದರು.