ಬೆಂಗಳೂರು:ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟಿನ ಅಸಮಾಧಾನ ಇಲ್ಲ. ಕೊಂಚ ಭಿನ್ನಾಭಿಪ್ರಾಯ ಮಾತ್ರ ಇದ್ದು, ಸದಾನಂದಗೌಡರ ಜೊತೆ ಎಲ್ಲಾ ತೀರ್ಮಾನ ಮಾಡುತ್ತೇವೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.
ಎಸ್ ಟಿ ಸೋಮಶೇಖರ್ ಯಶವಂತಪುರ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ.. ಇಂದು ಯಶವಂತಪುರ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ನವೆಂಬರ್ 26 ಮತ್ತು 30 ರಂದು ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಾರೆ. 2 ಪಕ್ಷಗಳ ಕಾರ್ಯಕರ್ತರು ನನ್ನ ಜತೆ ಇದ್ದಾರೆ. ಹಳೆ ಪಕ್ಷದ ಶೇ. 70%ರಷ್ಟು ಜನ ನನ್ನ ಜತೆ ಇದ್ದಾರೆ. ಬಿಜೆಪಿಯ ಶೇ.100%ರಷ್ಟು ಕಾರ್ಯಕರ್ತರು ನನ್ನ ಜತೆ ಇದ್ದಾರೆ. ಚುನಾವಣೆ ಭಯ ನನಗಿಲ್ಲ. ಐದು ವರ್ಷಕ್ಕೊಮ್ಮೆ ಬರುವ ಅಭ್ಯರ್ಥಿಗಳಿಗೆ ಮಾತ್ರ ಭಯ ಇರುತ್ತದೆ. ಜವರಾಯಿಗೌಡ ಅವರು ಹೋದ ಕಡೆಯೆಲ್ಲಾ ಫ್ಯಾಮಿಲಿ, ಫ್ಯಾಮಿಲಿ ಅಂತಾ ಅಳುತ್ತಾ ಇದ್ದಾರೆ. ಮಗನ ಮದುವೆ ಮಾಡಿಲ್ಲ, ಮನೆ ಕಟ್ಟಿಲ್ಲ ಅಂತಾ 169 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಹೀಗಿದ್ದೂ ಅಳುವುದ್ಯಾವುದಕ್ಕೆ ಎಂದು ಟಾಂಗ್ ನೀಡಿದರು.
ಪೊಲೀಸ್ ಅಧಿಕಾರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಅಧಿಕಾರಿಗೂ ನಮ್ಮ ಪರ ಪ್ರಚಾರ ಮಾಡಿ ಅಂತಾ ಹೇಳಿಲ್ಲ ಎಂದರು.
ಅಂಬರೀಶ್ ಸಮಾಧಿಗೆ ಭೇಟಿ:ಇದೇ ವೇಳೆ ಎಸ್ ಟಿ ಸೋಮಶೇಖರ್ ಕಂಠೀರವ ಸ್ಟುಡಿಯೋದಲ್ಲಿನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು. ಇಂದು ದಿ. ಅಂಬರೀಶ್ ಅವರ ಮೊದಲ ಪುಣ್ಯ ದಿನವಾದ ಹಿನ್ನೆಲೆ ಪುಣ್ಯ ಸ್ಥಳಕ್ಕೆ ಆಗಮಿಸಿ, ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಸಂಸದೆ ಸುಮಲತಾ ಅಂಬಿ, ಅನರ್ಹ ಶಾಸಕ ಮುನಿರತ್ನ ಉಪಸ್ಥಿತರಿದ್ದರು.
ಅಂಬರೀಶ್ ರವರ ಸಮಾಜ ಸೇವೆ ಹಾಗೂ ಚಿತ್ರರಂಗದಲ್ಲಿ ಸಲ್ಲಿಸಿರುವ ಅಪಾರವಾದ ಸೇವೆಗೆ ಅವರಿಗೆ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕು. ಅಂಬರೀಶ್ ಅವರು ವಸತಿ ಸಚಿವರಾಗಿದ್ದಾಗ ಯಶವಂತಪುರ ಕ್ಷೇತ್ರದಲ್ಲಿ ಸಾವಿರಾರು ವಸತಿಗಳನ್ನು ಬಡ ಜನತೆಗೆ ನೀಡಿರುವುದನ್ನು ಎಸ್ ಟಿ ಸೋಮಶೇಖರ್ ಸ್ಮರಿಸಿದರು.