ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬಹುಮತ ಇಲ್ಲ ಎಂಬ ಕೊರಗು ಎದುರಿಸುತ್ತಿದ್ದ ಆಡಳಿತ ಪಕ್ಷ ಬಿಜೆಪಿಗೆ ಈಗ ಮೇಲ್ಮನೆಯಲ್ಲೂ ಬಹುಮತ ಲಭ್ಯವಾಗಿದೆ. ಇತ್ತೀಚೆಗೆ ವಿಧಾನಸಭೆ, ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ಒಟ್ಟು 11 ಸ್ಥಾನಗಳಿಗೆ ನಡೆದ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 6 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸದಸ್ಯರ ಸಂಖ್ಯೆಯನ್ನು 39ಕ್ಕೆ ಹೆಚ್ಚಿಸಿಕೊಂಡು ಮೆಜಾರಿಟಿ ಸಾಧಿಸಿದೆ.
ಬಿಜೆಪಿಯು ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದರೂ ಕೌನ್ಸಿಲ್ನಲ್ಲಿ ಬಹುಮತದ ಕೊರತೆ ಇದ್ದುದರಿಂದ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ಮತಾಂತರ ನಿಷೇಧ ಸೇರಿದಂತೆ ಹಲವಾರು ವಿವಾದಾತ್ಮಕ ವಿಧೇಯಕಗಳಿಗೆ ಅಂಗೀಕಾರ ಪಡೆಯುವಾಗ ಎಚ್ಚರಿಕೆಯ ಹೆಜ್ಜೆಯಿಡಬೇಕಾಗಿತ್ತು.
ಪ್ರತಿಪಕ್ಷ ಕಾಂಗ್ರೆಸ್ ಪ್ರಮುಖ ವಿಧೇಯಕಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಬಿಜೆಪಿ ಮಸೂದೆಗೆ ಅಂಗೀಕಾರ ಪಡೆಯಲು ಜೆಡಿಎಸ್ ನೆರವು ಪಡೆಯಬೇಕಾಗಿತ್ತು. ಪರಿಷತ್ತಿನಲ್ಲಿ ಬಹುಮತದ ಕೊರತೆಯಿಂದ ಆಗುವ ಅಡಚಣೆಗಳ ನಿವಾರಣೆಗೆ ಬಹುಮತ ಸಾಧಿಸಲೇಬೇಕೆನ್ನುವ ಗುರಿಯಿಟ್ಟುಕೊಂಡು ಚುನಾವಣೆ ಕಾರ್ಯತಂತ್ರ ರೂಪಿಸಿದ ಬಿಜೆಪಿ ಎರಡು ಶಿಕ್ಷಕರ ಕ್ಷೇತ್ರ ಮತ್ತು ಎರಡು ಪದವೀಧರ ಕ್ಷೇತ್ರದಲ್ಲಿ ನಡೆದ ಮೇಲ್ಮನೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಗುರಿ ಸಾಧಿಸಿದೆ.