ಬೆಂಗಳೂರು :ಬಿಟ್ಕಾಯಿನ್ ವಿಚಾರವಾಗಿ ಸರ್ಕಾರದ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್ ವಾಗ್ದಾಳಿಯನ್ನು ಮುಂದುವರಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ಬಿಟ್ಕಾಯಿನ್ ಅವಶ್ಯಕತೆ ಇಲ್ಲದ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ಬೆಂಕಿ ಇಲ್ಲದೆಯೇ ಹೊಗೆಯಾಡುತ್ತಾ' ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ವಿಚಾರವಾಗಿ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಚರ್ಚಿಸುತ್ತಾರೆ ಅಂದ್ರೆ ಅವಶ್ಯಕತೆ ಇಲ್ಲದ ವಿಚಾರವೇ?. ಈ ಬಗ್ಗೆ ರಾಜ್ಯದ ಜನತೆಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ನವರು ಇದ್ದಾರೆ ಎಂಬ ಗೃಹ ಸಚಿವ ಆರೋಪಕ್ಕೆ ಪ್ರತಿಕ್ರಿಯಿಸಿ, ಹಗರಣದಲ್ಲಿ ನಮ್ಮವರೂ ಇದ್ದರೆ ಅವರ ಹೆಸರು ಬಹಿರಂಗಪಡಿಸಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅದು ಬಿಜೆಪಿಯವರೇ ಆಗಿರಲಿ, ಕಾಂಗ್ರೆಸ್ನವರೇ ಆಗಿರಲಿ ಎಂದರು.
ಹಗರಣದಲ್ಲಿ ಭಾಗಿಯಾದವರ ಬಗ್ಗೆ ನಾವೂ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಬಿಟ್ ಕಾಯಿನ್ ಯಾರ ಬಳಿ ಇದೆ. ಯಾವಾಗ ಪಂಚನಾಮೆ ಮಾಡಿದ್ರು ಎಂಬುದನ್ನು ಸರ್ಕಾರ ಜನರಿಗ ಸಂಪೂರ್ಣ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.