ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ದಂಧೆ (Karnataka Bitcoin case) ಭಾರೀ ಸಂಚಲನ ಉಂಟು ಮಾಡಿದೆ.
ವಿಧಾನಸೌಧ ಪಡಸಾಲೆಯ ಮೂಲೆಮೂಲೆಯಲ್ಲೂ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಆಡಳಿತ ಪಕ್ಷದವರು ಬೊಟ್ಟು ಮಾಡಿದರೆ ಮತ್ತೊಂದೆಡೆ, ಬಿಜೆಪಿ ನಾಯಕರು ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿಯಲ್ಲಿರುವ ಯಾವ ನಾಯಕರು ಸಹ ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈ ಬೆಳವಣಿಗೆಯ ಮಧ್ಯೆ ಜಾಮೀನಿನ ಮೇರೆಗೆ ಹೊರಬಂದಿರುವ ಶ್ರೀಕಿ (Srikrishna Ramesh alias Sriki) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, 9 ಕೋಟಿಯಷ್ಟು ಹಣವನ್ನು ಯಾರೂ ಸೀಜ್ ಮಾಡಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿರುವ ಶ್ರೀಕಿ ನವೆಂಬರ್ 6ರಂದು ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅವರ ಜೊತೆಗೆ ಉದ್ಯಮಿ ಪುತ್ರ ವಿಷ್ಣುಭಟ್ ನನ್ನ ಜೀವನ್‌ಭೀಮಾನಗರ ಪೊಲೀಸರು ಬಂಧಿಸಿದ್ದರು. ಈ ವೇಳೆ ವಿಷ್ಟುಭಟ್ ಮನೆಯಲ್ಲಿ ಗಾಂಜಾ ಪತ್ತೆಯಾಗಿತ್ತು. ಶ್ರೀಕಿ ಉಳಿದುಕೊಂಡಿದ್ದ ಹೊಟೇಲ್ ರೂಮಿನಲ್ಲಿ ಯಾವುದೇ ರೀತಿಯ ಮಾದಕ ವಸ್ತು ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ವಿಚಾರಣೆ ನಡೆಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದರು.
ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶ್ರೀಕಿ:
'ನಾನು ಏನೂ ಮಾಡಿಲ್ಲ ಮಾಧ್ಯಮದವರೇ ಎಲ್ಲವನ್ನೂ ಸೃಷ್ಟಿ ಮಾಡುತ್ತಿದ್ದಾರೆ. ನನಗೆ ಜಾಮೀನು ಯಾರು ನೀಡಿದ್ದಾರೆ ನನಗೆ ಗೊತ್ತಿಲ್ಲ. ಪೋಲಿಸರು ಕೋಟ್ಯಂತರ ರೂಪಾಯಿ ಹಣ ಸೀಜ್ ಮಾಡಿರುವುದು ಸುಳ್ಳು. ನಾನು ಹೆಬ್ಬಾಳದ ಆಸ್ಪತ್ರೆಗೆ ತೆರಳುತ್ತಿದ್ದೇನೆ. ನಮ್ಮ ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ. ಬಿಟ್ ಕಾಯಿನ್ ವಿಚಾರದ ಬಗ್ಗೆ ಗೊತ್ತಿಲ್ಲ' ಎಂದು ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಸರ್ಕಾರಿ ವೆಬ್‌ಸೈಟ್ ಜೊತೆಗೆ ಚೀನಿ ಆ್ಯಪ್ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣ ಸಂಪಾದನೆ ಮಾಡಿದ ಆರೋಪದದಡಿ ಈ ಹಿಂದೆ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು. ಹೊರದೇಶಗಳಿಂದ ಡ್ರಗ್ಸ್ ತರಿಸಿಕೊಂಡು ಸಬ್ ಪೆಡ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಇವರ ಮೇಲಿದೆ. ಈಗ ಬಿಟ್ ಕಾಯಿನ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದಲ್ಲಿ ಶ್ರೀಕಿ ಬಳಿ 9 ಕೋಟಿ ರೂಪಾಯಿಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು.