ಬೆಂಗಳೂರು: ಹುಟ್ಟುಹಬ್ಬ, ಬೀಳ್ಕೊಡುಗೆ ಅಥವಾ ಸ್ವಾಗತ ಕಾರ್ಯಕ್ರಮ ಹೆಸರಿನಲ್ಲಿ ಪೊಲೀಸ್ ಠಾಣೆಗಳಲ್ಲಿ ಸಾರ್ವತ್ರಿಕವಾಗಿ ಹುಟುಹಬ್ಬ ಆಚರಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಶಿಸ್ತಿನ ಇಲಾಖೆ ಎಂದು ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡು ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಮೂಲಕ ಜನರಲ್ಲಿ ಪೊಲೀಸರ ಬಗ್ಗೆ ತಪ್ಪು ಸಂದೇಶ ಮೂಡಲು ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ, ಹುಟ್ಟುಹಬ್ಬವನ್ನು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಜೊತೆ ಸಂಭ್ರಮಾಚರಣೆ ಮಾಡಕೂಡದು. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕಾದ 10 ಅಂಶಗಳ ಬಗ್ಗೆ ಡಿಜಿ ಪ್ರವೀಣ್ ಸೂದ್ ತಾಕೀತು ಮಾಡಿದ್ದಾರೆ. ಅವುಗಳು ಈ ಕೆಳಕಂಡಂತಿವೆ.
1. ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಅಪರಾಧ ಹಿನ್ನೆಲೆಯುಳ್ಳ, ಸಮಾಜಘಾತಕ ವ್ಯಕ್ತಿ, ರೌಡಿಶೀಟರ್ ಮುಂತಾದ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿರತಕ್ಕದ್ದಲ್ಲ.
2. ಪೊಲೀಸ್ ಠಾಣೆ, ವೃತ್ತ ಕಚೇರಿ, ಉಪ ವಿಭಾಗದ ಕಚೇರಿಗಳು ಮುಂತಾದ ಕಚೇರಿಗಳು ಸಾರ್ವಜನಿಕ ಕಚೇರಿಗಳಾಗಿದ್ದು, ಇಂತಹ ಠಾಣೆ, ಕಚೇರಿಗಳಲ್ಲಿ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಮುಂತಾದ ಖಾಸಗಿ ಆಚರಣೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು. ಇಂತಹ ಆಚರಣೆಗಳು ಪೊಲೀಸ್ ಇಲಾಖೆಗೆ ಶೋಭೆ ತರುವುದಿಲ್ಲ.
3. ಅಪರಾಧ ಹಿನ್ನೆಲೆಯುಳ್ಳ ಸಮಾಜ ಘಾತಕ ವ್ಯಕ್ತಿಗಳು ನಡೆಸುವ ಕಾರ್ಯಕ್ರಮಗಳಲ್ಲಿ ಪೊಲೀಸ್ ಅಧಿಕಾರಿಗಳು ಪಾಲ್ಗೊಳ್ಳುವುದು ಸರಿಯಾದ ಕ್ರಮವಲ್ಲ.
4. ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪೂರ್ವದಲ್ಲಿ ಅಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ವ್ಯಕ್ತಿ, ಸಂಘ - ಸಂಸ್ಥೆಯ ಪೂರ್ವಪರ ಚರಿತ್ರೆ ಪರಿಶೀಲಿಸಿದ ನಂತರ ಅಂತಹ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸೂಕ್ತವೇ ಎಂಬುದನ್ನು ನಿರ್ಧರಿಸುವುದು.