ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ರಾಜ್ಯ ಪೊಲೀಸರು ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಬಾರಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಈ ಹೊಸ ತಂತ್ರಜ್ಞಾನ ಮೂಲಕ ನಕಲಿ ಆಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗದಂತೆ ತಡೆಯಬಹುದಾಗಿದೆ. ಕಾನ್ಸ್ಟೇಬಲ್, ಪಿಎಸ್ಐ ಸೇರಿದಂತೆ ವಿವಿಧ ವೃಂದಗಳ ನೇಮಕಾತಿಯ ಪ್ರತಿ ಹಂತದಲ್ಲಿಯೂ ಇನ್ನು ಮುಂದೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿ ಇರಲಿದೆ.
ಏನಿದು ಬಯೋಮೆಟ್ರಿಕ್ ವ್ಯವಸ್ಥೆ?
ಪೊಲೀಸ್ ಹುದ್ದೆಯ ನೇಮಕಾತಿಗಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದಿಂದ ಪರೀಕ್ಷೆ ಪ್ರಕ್ರಿಯೆಗಳು ನಡೆಲಿದೆ. ಇತ್ತೀಚೆಗೆ 402 ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ 1.20 ಲಕ್ಷ ಅರ್ಜಿಗಳು ಬಂದಿವೆ.
ಬೆಂಗಳೂರಿನಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ ಮೈಸೂರು ರಸ್ತೆಯಲ್ಲಿರುವ ಸಿಎಆರ್ ಹೆಡ್ ಕ್ವಾರ್ಟರ್ಸ್, ಆಡುಗೋಡಿ ಹಾಗೂ ಕೆಎಸ್ಆರ್ಪಿ ಮೈದಾನದಲ್ಲಿ ಇಬ್ಬರು ಡಿಸಿಪಿ ಹಾಗೂ ಓರ್ವ ಐಜಿಪಿ ಅಧಿಕಾರಿ ನೇತೃತ್ವದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ.
ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿ ಉತ್ತೀರ್ಣರಾದ ಬಳಿಕ ಆಭ್ಯರ್ಥಿಯ ಬೆರಳಚ್ಚು ಮಾದರಿ ತೆಗೆದುಕೊಳ್ಳಲಿದ್ದಾರೆ. ಜತೆಗೆ ವಿಡಿಯೊ ರೆಕಾರ್ಡಿಂಗ್ ಹಾಗು ಸಿಸಿಟಿವಿ ಕ್ಯಾಮರಗಳು ಅಳವಡಿಲಾಗಿದೆ. ಪರೀಕ್ಷೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು 5 ಹಂತಗಳಲ್ಲಿ ತಪಾಸಣೆ ನಡೆಸಲಾಗುತ್ತದೆ.
- ಅರ್ಜಿ ಸಲ್ಲಿಸುವಾಗ
- ದೈಹಿಕ ಪರೀಕ್ಷೆ ಬಳಿಕ
- ಲಿಖಿತ ಪರೀಕ್ಷೆ ವೇಳೆ
- ವೈದ್ಯಕೀಯ ಪರೀಕ್ಷೆ ವೇಳೆ
- ಸಂದರ್ಶನದ ವೇಳೆ ಬೆರಳಚ್ಚು (ಫಿಂಗರ್ ಪ್ರಿಂಟ್) ತೆಗೆದುಕೊಳ್ಳಲಾಗುತ್ತದೆ.
ಆಯಾ ಆಭ್ಯರ್ಥಿಗಳ ಬೆರಳಚ್ಚು ಒಂದೇ ಆಗಿದ್ದರೆ, ಅಭ್ಯರ್ಥಿಗೆ ನೇಮಕಾತಿ ಪತ್ರ ದೊರೆಯಲಿದೆ. ಈ ಐದು ಹಂತಗಳಲ್ಲಿ ಬೆರಳಚ್ಚು (ಫಿಂಗರ್ ಪ್ರಿಂಟ್) ಸ್ಯಾಂಪಲ್ ವ್ಯತ್ಯಾಸವಾದರೆ ಮುಲಾಜಿಲ್ಲದೇ ಅಭ್ಯರ್ಥಿಯನ್ನು ತಿರಸ್ಕರಿಸಲಾಗುವುದು ಎಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ತಿಳಿಸಿದ್ದಾರೆ.
ಪೊಲೀಸ್ ಕೆಲಸ ಕೊಡಿಸುವುದಾಗಿ ಆಭ್ಯರ್ಥಿಗಳನ್ನು ನಂಬಿಸಿ, ಲಕ್ಷಾಂತರ ರೂ.ಪಡೆದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಜತೆಗೆ ಪರೀಕ್ಷೆ ವೇಳೆ ನಕಲಿ ಅಭ್ಯರ್ಥಿಗಳು ಭಾಗಿಯಾಗಿ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಇದರಿಂದ ಕಷ್ಟಪಟ್ಟು ಓದಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತಿತ್ತು.
ಹೀಗಾಗಿ ಯಾರಿಗೂ ಅನ್ಯಾಯವಾಗದಂತೆ ಹಾಗೂ ಅಕ್ರಮ ತಡೆಯಲು ಹೊಸದಾಗಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ತರಲಾಗಿದೆ. ಇತ್ತೀಚೆಗೆ 545 ಕಾನ್ಸ್ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗಿದೆ. ಜತೆಗೆ 3,700 ಸಿವಿಲ್ ಪೊಲೀಸರ ಪರೀಕ್ಷೆಯನ್ನ ಮಾಡಲಾಗಿದೆ. 402 ಪಿಎಸ್ಐ ಹುದ್ದೆಗಳಿಗಾಗಿ ದೈಹಿಕ ಪರೀಕ್ಷೆ ನಡೆಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
- ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಪಾಸಾಗಿ ನೌಕರಿ ತೆಗೆದುಕೊಳ್ಳಿ.
- ಮಧ್ಯವರ್ತಿಗಳ ತೋರಿಸುವ ಆಮಿಷಗಳಿಗೆ ಒಳಗಾಗಬೇಡಿ.
- ಉದ್ಯೋಗ ಗಿಟ್ಟಿಸಿಕೊಳ್ಳಲು ಯಾವುದೇ ಹಣ ಹಾಗೂ ಇನ್ನಿತರ ಪ್ರಭಾವಗಳಿಗೆ ಒಳಗಾಗಬೇಡಿ.
- ಮೆರಿಟ್ ಹಾಗೂ ಪರೀಕ್ಷೆಯಲ್ಲಿ ಗಳಿಸುವ ಅಂಕವೇ ನೇಮಕಾತಿಗೆ ಆಧಾರ ಎಂದು ಎಡಿಜಿಪಿ ಅಮ್ರಿತ್ ಪಾಲ್ ತಿಳಿಸಿದ್ದಾರೆ.