ಬೆಂಗಳೂರು :ರಾಜ್ಯ ಸರ್ಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲ ಪಡೆದಿರುವ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ (ಬಿಬಿಸಿ) ಮತ್ತು ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯುಲರ್ ಪ್ಲಾಟ್ ಫಾರಂಸ್ (ಸಿ-ಕ್ಯಾಂಪ್), ಬಯೋ ಸ್ಪೆಕ್ಟ್ರಂ ವಾರ್ಷಿಕ ಸಮೀಕ್ಷೆಯಲ್ಲಿ ಸಾರ್ವಜನಿಕ ವಲಯ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಶನಿವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಸರ್ಕಾರದ ಕರ್ನಾಟಕ ಇನ್ನೋವೇಟಿವ್ ಟೆಕ್ನಾಲಾಜಿಕಲ್ ಸೊಸೈಟಿಯ (ಕಿಟ್ಸ್) ಬೆಂಬಲ ಹೊಂದಿರುವ ಮಣಿಪಾಲ್ ಬಯೋ ಇನ್ಕ್ಯುಬೇಟರ್ ಸಂಸ್ಥೆಯು ಖಾಸಗಿ ವಲಯದಡಿ ಐದನೇ ಸ್ಥಾನ ಗಳಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಇನ್ಕ್ಯುಬೇಟರ್ಗಳಿಗೆ ಅಗ್ರಸ್ಥಾನ ಬಿಬಿಸಿ ಮತ್ತು ಸಿ-ಕ್ಯಾಂಪ್ ಎರಡೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉಪಕ್ರಮಗಳಾಗಿವೆ. ಇವುಗಳಿಗೆ ಕಿಟ್ಸ್ ಮೂಲಕ ಬೆಂಬಲ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
40 ಇನ್ಕ್ಯುಬೇಟರ್ಗಳು ಅಂತಿಮ ಸುತ್ತಿಗೆ :ಈ ವರ್ಷದ ರಾಷ್ಟ್ರೀಯ ಬಯೋಸ್ಪೆಕ್ಟ್ರಂ ಸಮೀಕ್ಷೆಯಲ್ಲಿ 40 ಇನ್ಕ್ಯುಬೇಟರುಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು. ರಾಜ್ಯದಲ್ಲಿ ನವೋದ್ಯಮಗಳಿಗೆ ಅಗತ್ಯವಾದ ಕಾರ್ಯ ಪರಿಸರವನ್ನು ಸೃಷ್ಟಿಸಲಾಗಿದೆ. ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಿಶೇಷವಾಗಿ, ಜೈವಿಕ ವಿಜ್ಞಾನ ಮತ್ತು ಆರೋಗ್ಯ ವಿಜ್ಞಾನ ಕ್ಷೇತ್ರಗಳಿಗೆ ಆದ್ಯ ಗಮನ ಹರಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಐಟಿ-ಬಿಟಿ ಸಚಿವರನ್ನು ಭೇಟಿಯಾದ ಇಸ್ರೇಲ್ ನಿಯೋಗ.. ರಾಜ್ಯದಲ್ಲಿ ನವೋದ್ಯಮವು ಬೆಳೆಯುತ್ತಿರುವುದರ ಬಗ್ಗೆ ಚರ್ಚೆ