ಬೆಂಗಳೂರು:ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ ವ್ಯಕ್ತಿ ಅದರ ವಿಮೆ ವರ್ಗಾವಣೆಗೂ ಮುನ್ನವೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಮೃತನ ಕುಟುಂಬದ ಸದಸ್ಯರಿಗೆ ಮೋಟಾರು ವಾಹನ ಅಪಘಾತ ವಿಮೆ ಕ್ಲೇಮ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರಿನ ಗ್ರಾಹಕ ಕೋರ್ಟ್ (Consumer Court of Bengaluru) ಆದೇಶಿಸಿದೆ.
ಮೃತ ಬೈಕ್ ಮಾಲೀಕನ ಪತ್ನಿ ಮತ್ತು ಮಗ ಪರಿಹಾರ ನಿರಾಕರಿಸಿದ ವಿಮಾ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕ ನ್ಯಾಯಾಲಯದ ಈ ಆದೇಶ ಮಾಡಿದೆ. ಅಪಘಾತ ನಡೆದ ಸಮಯದಲ್ಲಿ ವಾಹನದ ವಿಮೆ ಅದರ ಮೂಲ ಮಾಲೀಕರ ಹೆಸರಿನಲ್ಲಿದೆ. ಹಾಗಾಗಿ, ಮೃತನ ಕುಟುಂಬಸ್ಥರು ಗ್ರಾಹಕ ಸಂರಕ್ಷಣಾ ಕಾಯ್ದೆಯ (The Consumer Protection Act) ಅಡಿಯಲ್ಲಿ ಯಾವುದೇ ಕ್ಲೇಮ್ ಮಾಡಲು ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲರು ವಾದಿಸಿ, ಮೋಟಾರು ವಾಹನ ಕಾಯ್ದೆಯ (The Motor Vehicles Act) ಪ್ರಕಾರ, ಅರುಣ್ ಅವರ ಕುಟುಂಬವು ವಿಮಾ ಕ್ಲೇಮ್‌ಗೆ ಅರ್ಹವಾಗಿದೆ. ಮೋಟಾರು ಸೈಕಲ್ ಅರುಣ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಖರೀದಿಸಿದ ಎರಡು ವಾರಗಳಲ್ಲಿ ವಿಮಾ ಪಾಲಿಸಿಯಲ್ಲಿಯೂ ಹೆಸರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಬೈಕ್ ಖರೀಸಿದಿಸಿದ 7 ದಿನಗಳಲ್ಲೇ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಾದಿಸಿದ್ದರು.
ವಿಮಾ ಸಂಸ್ಥೆ ಪರ ವಕೀಲರು ವಾದಿಸಿ, ಆಪಘಾತವಾದ ಸಮಯದಲ್ಲಿ ಮೊದಲ ಮಾಲೀಕ ಮೊಹಮ್ಮದ್ ಹೆಸರಿನಲ್ಲಿ ಪಾಲಿಸಿ ಇತ್ತು. ಬೈಕ್ ಖರೀದಿಸಿದ ಅರುಣ್ ಮತ್ತು ವಿಮಾ ಸಂಸ್ಥೆ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಆದ್ದರಿಂದ, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಗ್ರಾಹಕ ವೇದಿಕೆ ನ್ಯಾಯಾಧೀಶರು, ಅರುಣ್ ಮತ್ತು ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಡುವೆ ಯಾವುದೇ ಒಪ್ಪಂದವಿರಲಿಲ್ಲ. ಹಾಗೆಯೇ, ಸಂತ್ರಸ್ತರು ಸಂಸ್ಥೆಗೆ ಯಾವುದೇ ಪ್ರೀಮಿಯಂ ಪಾವತಿಸಿಲ್ಲ. ಆದ್ದರಿಂದ, ಅರ್ಜಿದಾರರನ್ನು ಇಲ್ಲಿ ಗ್ರಾಹಕರು ಎಂದು ಪರಿಗಣಿಸಲು ಬರುವುವುದಿಲ್ಲ ಎಂದಿದ್ದಾರೆ.