ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ರಾಹುಲ್ ಗಾಂಧಿ ಜತೆ ಪಾದಯಾತ್ರೆಯಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಕಷ್ಟು ಸುಸ್ತಾದರೂ, ಯಾತ್ರೆ ನೀಡುತ್ತಿರುವ ಯಶಸ್ಸು ರಾಜ್ಯ ನಾಯಕರ ಯಶಸ್ಸನ್ನು ಇಮ್ಮಡಿಗೊಳಿಸಿದೆ.
ಒಟ್ಟು 21 ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ 11 ದಿನದ ನಡಿಗೆ ಮುಕ್ತಾಯವಾಗಿದೆ. ಇನ್ನು 9 ದಿನದ ಪಾದಯಾತ್ರೆ ಬಾಕಿ ಇದೆ. ಇದರಲ್ಲಿ ಒಂದೆರಡು ದಿನ ವಿರಾಮ ಸಿಗಬಹುದು. ಆದರೆ ಕನಿಷ್ಠ ಒಂದು ವಾರದ ನಡಿಗೆಯಂತೂ ಬಾಕಿ ಉಳಿದಿದೆ. ಸೆ.7 ರಿಂದ ಆರಂಭಿಸಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಇಂದು 34ನೇ ದಿನಕ್ಕೆ ಕಾಲಿರಿಸಿದೆ. ಕೇರಳ ಮತ್ತು ತಮಿಳುನಾಡಿಗಿಂತ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಜನಸ್ಪಂದನೆ ಸಿಗುತ್ತಿದೆ. ಅತ್ಯುತ್ಸಾಹದಲ್ಲಿ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಇವರಿಗೆ ಸರಿಸಮನಾಗಿ ರಾಜ್ಯ ನಾಯಕರು ಕಷ್ಟಪಟ್ಟು ಹೆಜ್ಜೆಹಾಕುತ್ತಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಉತ್ತಮ ಜನಸ್ಫಂದನೆ : ಯಾತ್ರೆಯ ಯಶಸ್ಸಿನಲ್ಲಿ ರಾಜ್ಯದ ನಾಯಕರ ಪಾಲ್ಗೊಳ್ಳುವಿಕೆ ಹಾಗೂ ಬೆಂಬಲದ ವಿಚಾರದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ರಾಜ್ಯ ನಾಯಕರ ಶಾರೀರಿಕ ದಣಿವನ್ನು ಮರೆಸಿ, ಉತ್ಸಾಹದಿಂದ ಹೆಜ್ಜೆ ಹಾಕಲು ಸಹಕಾರ ಮಾಡಿಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಸ್ತಿನ ನಡುವೆಯೇ ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಿನವಿಡೀ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿಲ್ಲವಾದರೂ, ತಮ್ಮ ಉಪಸ್ಥಿತಿಯನ್ನು ಎಲ್ಲಾ ಕಡೆ ತೋರಿಸುತ್ತಿದ್ದಾರೆ.
ಸಕ್ರಿಯವಾಗಿ ಭಾಗಿಯಾದ ರಾಜ್ಯನಾಯಕರು : ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕೆಲವರು ತಮಗೆ ನೀಡಿದ ಗುರಿಯಷ್ಟು ಸಂಖ್ಯೆಯಲ್ಲಿ ಜನರನ್ನು ಸೇರಿಸಿಲ್ಲ. ಆದರೆ, ನಿರೀಕ್ಷೆ ಮಾಡಿರದ ನಾಯಕರು ದೊಡ್ಡ ಮಟ್ಟದಲ್ಲಿ ಜನ ಬೆಂಬಲ ತೋರಿಸಿದ್ದಾರೆ. ಒಟ್ಟಾರೆ ಹೋದಲ್ಲೆಲ್ಲಾ ರಾಹುಲ್ ಗಾಂಧಿಗೆ ಜನ ಬೆಂಬಲ ಚೆನ್ನಾಗಿ ಸಿಗುತ್ತಿದ್ದು, ರಾಜ್ಯದಲ್ಲಿ ಅವರು ಅತ್ಯುತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ.
ಉತ್ತಮ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ರಾಹುಲ್, ಇಮ್ಮಡಿ ಉತ್ಸಾಹದಿಂದ ಮುನ್ನಡೆದಿದ್ದಾರೆ. ಆದರೆ, ರಾಜ್ಯ ನಾಯಕರಲ್ಲಿ ಹಲವರು ವಯಸ್ಸು, ಅನಾರೋಗ್ಯ, ಶಾರೀರಿಕ ದೌರ್ಬಲ್ಯ ಇತ್ಯಾದಿ ಕಾರಣಗಳಿಂದಾಗಿ ಅತ್ಯುತ್ಸಾಹದಿಂದ ನಡೆಯಲಾಗದೇ ಹೋಗಿದ್ದಾರೆ. ಆದರೆ ತಮ್ಮ ಉಪಸ್ಥಿತಿಯನ್ನು ಎಲ್ಲಿಯೂ ಕಡೆಗಣಿಸಿಲ್ಲ.