ಕರ್ನಾಟಕ

karnataka

ETV Bharat / city

ಯಾತ್ರಾರ್ಥಿಗಳಿಗೆ ಖುಷಿ ಸುದ್ದಿ: ರಾಜ್ಯ ಸರ್ಕಾರದಿಂದ ಕಾಶಿ ಯಾತ್ರೆ ಯೋಜನೆ ಆರಂಭ - ಇಲ್ಲಿದೆ ಫುಲ್ ಡಿಟೇಲ್ಸ್ - ಮುಜರಾಯಿ ಹಜ್‌ ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ

ಒಂದು ವಾರದ 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ 5 ಸಾವಿರ ರೂಗಳನ್ನು ರಾಜ್ಯ ಸರ್ಕಾರದಿಂದ ಸಹಾಯಧನವನ್ನಾಗಿ ನೀಡಲಾಗುವುದು. ಪ್ರತಿ ವರ್ಷ 30,000 ಜನರಿಗೆ ಈ ಪ್ರಯೋಜನ ನೀಡಲು ಸರ್ಕಾರ ಯೋಜಿಸಿದೆ ಎಂದು ಸಚಿವೆ ಜೊಲ್ಲೆ ಮಾಹಿತಿ ನೀಡಿದರು.

ಕಾಶಿ ಯಾತ್ರೆ
ಕಾಶಿ ಯಾತ್ರೆ

By

Published : Jul 11, 2022, 9:25 PM IST

Updated : Jul 12, 2022, 3:24 PM IST

ಬೆಂಗಳೂರು: ಶ್ರಾವಣ ಮಾಸದ ಕೊನೆಯ ವಾರದಲ್ಲಿ ರಾಜ್ಯದಿಂದ ಕಾಶಿ ಯಾತ್ರೆಗೆ ಭಾರತ್‌ ಗೌರವ್‌ ರೈಲು ಯೋಜನೆ ಪ್ರಾರಂಭವಾಗಲಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಬೈಯ್ಯಪ್ಪನಹಳ್ಳಿಯ ಸರ್‌ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಶಿ ಯಾತ್ರೆಗೆ ಕಾಯ್ದಿರಿಸಲಾಗಿರುವ ರೈಲಿನ ಪರಿಶೀಲನೆ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.

ಕಾಶಿಯಾತ್ರೆಗೆ ಯಾತ್ರಾರ್ಥಿಗಳನ್ನು ಕೊಂಡೊಯ್ಯುವ ಭಾರತ್‌ ಗೌರವ್‌ ರೈಲನ್ನು ಸಿದ್ಧಪಡಿಸಲು ಸಿಎಂ ಅನುಮತಿ ದೊರೆತಿದೆ. ಶ್ರಾವಣ ಮಾಸದ ಕೊನೆಯ ವಾರದಲ್ಲಿ ಯಾತ್ರೆ ಪ್ರಾರಂಭವಾಗಲಿದೆ. ಈ ಮೂಲಕ ಭಾರತ್‌ ಗೌರವ್‌ ರೈಲು ಸೇವೆಯನ್ನು ಒದಗಿಸುತ್ತಿರುವ ದೇಶದ ಮೊದಲ ರಾಜ್ಯ ಹಾಗೂ ಇಲಾಖೆ ಎನ್ನುವ ಹೆಗ್ಗಳಿಕೆಗೆ ಇಲಾಖೆ ಪಾತ್ರವಾಗಲಿದೆ ಎಂದು ಸಚಿವೆ ಜೊಲ್ಲೆ ತಿಳಿಸಿದರು.

ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆಯನ್ನು ಕೈಗೊಳ್ಳಬೇಕು ಎನ್ನುವುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎನ್ನುವುದು ನನ್ನ ಆಶಯವಾಗಿತ್ತು. ಇದಕ್ಕೆ ಬೆನ್ನೆಲುಬಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.

ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಪ್ಯಾಕೇಜುಗಳನ್ನು ರೂಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಭಾರತ್‌ ಗೌರವ್‌ ರೈಲು ಯೋಜನೆಯ ಅಡಿ ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಕಾಶಿ ಯಾತ್ರೆಗೆ ಕಾಯ್ದಿರಿಸಲಾಗಿರುವ ರೈಲಿನ ಪರಿಶೀಲನೆ

ರೈಲನ್ನು ಮಾರ್ಪಾಡಿಸುವ ಹಾಗೂ ಇನ್ನಿತರೆ ಅಗತ್ಯ ಕ್ರಮಗಳ ಬಗ್ಗೆ ವಿಸ್ತ್ರತವಾಗಿ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ರಿಯಾಯಿತಿ ದರದಲ್ಲಿ 7 ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕಾಗಿ ಈಗಾಗಲೇ 1 ಕೋಟಿ ರೂಪಾಯಿಗಳ ಭೌತಿಕ ಬ್ಯಾಂಕ್‌ ಗ್ಯಾರಂಟಿಯನ್ನು ನೀಡಿ ರೈಲನ್ನು ಬಾಡಿಗೆಗೆ ತಗೆದುಕೊಳ್ಳಲಾಗಿದೆ ಎಂದು ಹೇಳಿದರು.

ರೈಲು ವಿನ್ಯಾಸ:ಬೆಂಗಳೂರು - ವಾರಾಣಸಿ-ಅಯೋಧ್ಯೆ-ಪ್ರಯಾಗರಾಜ್‌-ಬೆಂಗಳೂರು ಮಾರ್ಗದಲ್ಲಿ ರೈಲು 7 ದಿನಗಳಲ್ಲಿ 4161 ಕಿಲೋಮೀಟರ್‌ಗಳಷ್ಟು ದಾರಿ ಕ್ರಮಿಸಲಿದೆ. 14 ಬೋಗಿಗಳನ್ನು ಈ ರೈಲು ಒಳಗೊಂಡಿರಲಿದ್ದು, 11 ಬೋಗಿಗಳನ್ನು ಪ್ರಯಾಣಿಕರ ಪ್ರವಾಸಕ್ಕೆ ಅಣಿ ಮಾಡಲಾಗುತ್ತಿದೆ. 3 ಟಯರ್‌ ಎಸಿಯ ವ್ಯವಸ್ಥೆ ಇರಲಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು.

ಅಲ್ಲದೇ, ನಮ್ಮ ರಾಜ್ಯದ ಪ್ರಮುಖ ದೇವಸ್ಥಾನಗಳ ಬ್ರಾಂಡಿಂಗ್‌ ಮಾಡುವ ಉದ್ದೇಶದಿಂದ 11 ಬೋಗಿಗಳ ಮೇಲೆ ರಾಜ್ಯದ ಪ್ರಮುಖ 11 ದೇವಸ್ಥಾನಗಳ ಮಾಹಿತಿಯನ್ನು ಅಳವಡಿಸಲಾಗುವುದು. ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ರೈಲ್ವೆಯ ಅಧೀನ ಸಂಸ್ಥೆಯ ಜೊತೆ ಐಆರ್‌ಸಿಟಿಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

7 ದಿನಕ್ಕೆ 10 ಸಾವಿರ:ಒಂದು ವಾರದ 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ 5 ಸಾವಿರ ರೂಗಳನ್ನು ರಾಜ್ಯ ಸರ್ಕಾರದಿಂದ ಸಹಾಯಧನವನ್ನಾಗಿ ನೀಡಲಾಗುವುದು. ಪ್ರತಿ ವರ್ಷ 30,000 ಜನರಿಗೆ ಈ ಪ್ರಯೋಜನ ನೀಡಲು ಸರ್ಕಾರ ಯೋಜಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದು ಕರ್ನಾಟಕದ ಮೊದಲ ಭಾರತ್ ಗೌರವ್ ರೈಲು ಎಂದು ಡಾ.ಅನುಪ್ ದಯಾನಂದ್ ಸಾಧು ಹೇಳಿದ್ದಾರೆ. 40 ರಿಂದ 45 ದಿನಗಳಲ್ಲಿ ಮೈಸೂರು ಕಾರ್ಯಾಗಾರದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಸಿದ್ಧಗೊಳಿಸಲಾಗುವುದು. ರೈಲನ್ನು ಬಳಕೆಯ ಹಕ್ಕಿನೊಂದಿಗೆ ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗುವುದು.

ಇದರಿಂದ ರೈಲ್ವೆಗೆ 20 ಕೋಟಿ ಆದಾಯ ಬರುತ್ತದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಯಾತ್ರಿಕ ಪ್ರಯಾಣಿಕರಿಗೆ ಅಗತ್ಯವಿರುವ ಆಹಾರ, ಅಡುಗೆ ಮತ್ತು ಇತರ ಮೂಲ ಅವಶ್ಯಕತೆಗಳಂತಹ ಎಲ್ಲಾ ಬ್ಯಾಕ್ ಎಂಡ್ ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ಸೌತ್‌ ವೆಸ್ಟರ್ನ್‌ ರೈಲ್ವೆಯ ಕಮರ್ಷಿಯಲ್‌ ಮ್ಯಾನೇಜರ್‌ ಡಾ ಅನೂಪ್‌ ದಯಾನಂದ್‌ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

(ಇದನ್ನೂ ಓದಿ: ಜೀವದ ಉಳಿವಿಗೆ ಜೀರೋ ಟ್ರಾಫಿಕ್​.. ಮುಸ್ಲಿಂ ಯುವಕನ ಹೃದಯ ಬಡಿತಕ್ಕೆ ಚಾಲನೆ ನೀಡಿದ ಹಿಂದೂ ಬಾಲಕಿ)

Last Updated : Jul 12, 2022, 3:24 PM IST

ABOUT THE AUTHOR

...view details