ಬೆಂಗಳೂರು : ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ ಬೆಸ್ಕಾಂ ನ 4152 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 261 ವಿದ್ಯುತ್ ಪರಿವರ್ತಕಗಳು ಮತ್ತು 128 ಡಬಲ್ ಪೋಲ್ ಸ್ಟ್ರಕ್ಚರ್ ಗಳು ತೀವ್ರ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ೮ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಾವಿರಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಅವುಗಳಲ್ಲಿ ಹೆಚ್ಚು ಹಾನಿಗೊಳಗಾದ ಕಂಬಗಳನ್ನು ಬದಲಿಸಲಾಗಿದೆ.
ಕಡಿಮೆ ಹಾನಿಗೊಳಗಾದ ಕಂಬಗಳನ್ನು ತ್ವರಿತಗತಿಯಲ್ಲಿ ದುರಸ್ಥಿಪಡಿಸಲಾಗಿದೆ. ಮೇ 17 ರಂದು ಸುರಿದ ಭಾರೀ ಮಳೆಗೆ ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 312 ಕಂಬಗಳು ಮುರಿದ್ದಿದ್ದು, 27 ಟಿಸಿಗಳು ಮತ್ತು 10 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಳಗಾಗಿವೆ.
ಮೇ 18 ರಂದು, 82 ವಿದ್ಯುತ್ ಕಂಬಗಳು, 5 ಟಿಸಿ ಮತ್ತು 6 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಯಾಗಿವೆ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 107 ಫೀಡರ್ ಗಳು ತೊಂದರೆಗೊಳಗಾಗಿದ್ದು ಎಲ್ಲವನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆಗೆ ಹಾನಿಗೊಳಗಾದ ವಿದ್ಯುತ್ ಕಂಬ ಸಬ್ ಸ್ಟೇಷನ್ ಮುಳುಗಡೆ: ಭಾರಿ ಮಳೆಗೆ ಬೆಂಗಳೂರಿನ ನಾಗವಾರ ಸಮೀಪದ ಗೆದ್ದಲಹಳ್ಳಿಯಲ್ಲಿರುವ 66/11 ಕೆವಿ ಸಬ್ ಸ್ಟೇಷನ್ ನೀರಿನಲ್ಲಿ ಮುಳುಗಡೆಯಾಗಿತ್ತು. ಶಿವಾಜಿನಗರ ಬೆಸ್ಕಾಂ ವಿಭಾಗದ ಸಿಬ್ಬಂದಿ ರಾತ್ರಿ 12 ಗಂಟೆಗೆ ಜೆಸಿಬಿ ಸಹಾಯದಿಂದ ಕೆಪಿಟಿಸಿಎಲ್ ಕಂಪೌಂಡ್ ಗೋಡೆ ಒಡೆದು ಸುಮಾರು ಒಂದು ಕಿ.ಮೀ ದೂರದ ವರೆಗೆ ಪಕ್ಕದ ಜಮೀನಿನಲ್ಲಿ ಕಾಲುವೆ ಮಾಡಿ, ನೀರು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದಾಗಿ ವಡ್ಡರಪಾಳ್ಳ, ರಾಜಣ್ಣ ಬಡಾವಣೆ, ಗದ್ದಲಹಳ್ಳಿ, ಬೈರತಿ ಸುತ್ತಲಿನ ಪ್ರದೇಶದ ಸುಮಾರು 28,000 ಗ್ರಾಹಕರಿಗೆ ಮಂಗಳವಾರ ರಾತ್ರಿ 3 ಗಂಟೆ ವೇಳೆಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ ಎಂದು ಶಿವಾಜಿನಗರ ವಿಭಾಗದ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗೆ ಹಾನಿಗೊಳಗಾದ ಟ್ರಾನ್ಸಫಾರ್ಮರ್ ಗೆದ್ದಲಹಳ್ಳಿ ಸಬ್ ಸ್ಟೇಷನ್ ಈ ಹಿಂದೆಯೂ ೨೦೨೦ ರ ಸೆಪ್ಟೆಂಬರ್ ನಲ್ಲಿ ಸುರಿದ ಭಾರೀ ಮಳೆಗೆ ಮುಳುಗಡೆ ಆಗಿತ್ತು. ಆದರೆ ಆ ಸಂದರ್ಭದಲ್ಲಿ ಪಂಪ್ ಸೆಟ್ ಬಳಸಿ ನೀರು ಹೊರಹಾಕಿದ್ದು, ವಿದ್ಯುತ್ ಸಂಪರ್ಕ ಸರಿಪಡಿಸಲು 15 ಗಂಟೆಗಳಿಗೂ ಹೆಚ್ಚು ಸಮಯಾವಕಾಶ ತಗೆದುಕೊಳ್ಳಲಾಗಿತ್ತು ಎಂದು ಬೆಸ್ಕಾಂ ಶಿವಾಜಿನಗರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ನಷ್ಟದ ಅಂದಾಜು : ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಸಾವಿರಾರು ವಿದ್ಯುತ್ ಕಂಬಗಳು ಮತ್ತು ಟಿಸಿ ಗಳು ಹಾನಿಗೊಳಗಾಗಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಮಳೆಯಿಂದ ಆದ ಅಂದಾಜು ನಷ್ಟದ ಬಗ್ಗೆ ವರದಿ ಸಿದ್ದಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಓದಿ :ಅಬ್ಬಾ ಬದುಕಿದೆವು..! ಕಾರ್ನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್