ಬೆಂಗಳೂರು: ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಎಳೆಯಲಾಗಿರುವ ಅನಧಿಕೃತ ಇಂಟರ್ನೆಟ್, ಡಿಶ್ ಹಾಗು ಒಎಫ್ಸಿ ಕೇಬಲ್‌ಗಳ ವಿರುದ್ಧ ಬೆಸ್ಕಾಂ ಸಮರ ಸಾರಿದ್ದು, ಕೇಬಲ್‌ಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಹಾಗು ವಿದ್ಯುತ್ ಕಂಬಗಳ ಮೇಲೆ ಅಕ್ರಮವಾಗಿ ಅಳವಡಿಸಿರುವ ಕೇಬಲ್ಗಳನ್ನು ತ್ವರಿತವಾಗಿ ತೆರವುಗೊಳಿಸುವ ಕಾರ್ಯಾಚರಣೆಗೆ ಬೆಸ್ಕಾಂ ಚಾಲನೆ ನೀಡಿದೆ.
ಬಿಬಿಎಂಪಿ ಆದೇಶ ಹಾಗೂ ಇತ್ತೀಚೆಗೆ ಸಂಜಯನಗರದ ಸಮೀಪ ಒಎಫ್ಸಿ ಕೇಬಲ್ ತುಳಿದು ವಿದ್ಯುತ್ ಅಪಘಾತಕ್ಕೊಳಕ್ಕಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಳಿಕ ಬೆಸ್ಕಾಂ ಎಚ್ಚೆತ್ತುಕೊಂಡಿದೆ. ವಿದ್ಯುತ್ ಕಂಬಗಳ ಮೇಲಿರುವ ಅನಧಿಕೃತ ಕೇಬಲ್ಗಳನ್ನು ತೆರವುಗೊಳಿಸುವ ಕೆಲಸಕ್ಕೆ ಇನ್ನಷ್ಟು ವೇಗ ನೀಡಿ, ಕೇಬಲ್ ಮತ್ತು ವೈರ್ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಬೆಂಗಳೂರು ನಗರ ಜಿಲ್ಲೆಯ ನಾಲ್ಕು ವೃತ್ತಗಳಲ್ಲಿ ಮೇ ತಿಂಗಳ ಅಂತ್ಯದ ವೇಳೆಗೆ ಸುಮಾರು 1,46,281 ಮೀಟರ್ ಉದ್ದದ ಒಎಫ್ಸಿ ಕೇಬಲ್, 87665 ಮೀಟರ್ ಉದ್ದದ ಡಿಶ್ ಕೇಬಲ್, 87,007 ಮೀಟರ್ ಉದ್ದದ ವಿವಿಧ ಖಾಸಗಿ ಕಂಪನಿಗಳ ಇಂಟರ್ನೆಟ್ ಡೇಟಾ ಕೇಬಲ್ ಹಾಗು ಸುಮಾರು 928 ಟಿಸಿಗಳ ಬಳಿ ಇರುವ ಅಪಾಯಕಾರಿ ಕೇಬಲ್ಗಳನ್ನು ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ್ದಾರೆ. ರಿಂಗ್ ಮೈನ್ ಯುನಿಟ್ (ಆರ್ ಎಂಯು) ಬಳಿ ಇರುವ 164 ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆರವುಗೊಳಿಸಲಾಗಿದೆ ಎಂದು ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಪರೇಷನ್ಸ್ ), ಎಂ.ಎಲ್. ನಾಗರಾಜ್ ತಿಳಿಸಿದ್ದಾರೆ. ಬೆಸ್ಕಾಂನಿಂದ ಅನುಮತಿ ಪಡೆಯದೆ ಮತ್ತು ಯಾವುದೇ ಸುರಕ್ಷಿತ ಕ್ರಮಗಳನ್ನು ಅಳವಡಿಸದೆ ವಿದ್ಯುತ್ ಕಂಬಗಳ ಮೇಲೆ ಜೋತು ಬಿಟ್ಟಿರುವ ಒಎಫ್ಸಿ ಮತ್ತು ಇಂಟರ್ನೆಟ್ ಡೇಟಾ ಕೇಬಲ್ಗಳನ್ನು ತೆರವುಗೊಳಿಲಾಗುತ್ತಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಧಿಕೃತ ಕೇಬಲ್‌ಗಳ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚೆಗೆ ಸಂಜಯನಗರ ಮತ್ತು ಹೆಬ್ಬಾಳದಲ್ಲಿ ಸಂಭವಿಸಿದ ಪ್ರತ್ಯೇಕ ಇಲಾಖೇತರ ವಿದ್ಯುತ್ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಮೇಲಿರುವ ಅನಧಿಕೃತ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮತ್ತು ನಿರ್ದೇಶಕ (ತಾಂತ್ರಿಕ) ಡಿ. ನಾಗಾರ್ಜುನ ಅವರ ಸೂಚನೆ ಮೇರೆಗೆ ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಪರೇಷನ್ಸ್ ), ಎಲ್ಲ ವಲಯಗಳ ಮುಖ್ಯ ಇಂಜಿನಿಯರ್ಗಳಿಗೆ ವಿದ್ಯುತ್ ವಿತರಣಾ ಕಂಬಗಳ ಮೇಲೆ ಅಳವಡಿಸಿರುವ ಅನಧಿಕೃತ ಕೇಬಲ್ಗಳು ಮತ್ತು ವೈರ್ಗಳನ್ನು ಜೂನ್ ತಿಂಗಳ ಒಳಗೆ ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಖಾಸಗಿ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಅನಧಿಕೃತ ಕೇಬಲ್ಗಳನ್ನು ಅಳವಡಿಸಿರುವ ಖಾಸಗಿ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನಧಿಕೃತ ಮತ್ತು ಸರಿಯಾಗಿ ನಿರ್ವಹಣೆ ಮಾಡದ ಕೇಬಲ್ಗಳಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಮತ್ತು ಮಳೆಗಾಲದಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ಕೂಡಲೇ ತೆರವುಗೊಳಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.