ಬೆಂಗಳೂರು: ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ 'ಬೇರೆಯೇ ಮಾತು' ಪುಸ್ತಕ ಬಿಡುಗಡೆ ಗಾಂಧಿ ಭವನದಲ್ಲಿಂದು ನಡೆಯಿತು. ಬೇರೆಯೇ ಮಾತು ಪುಸ್ತಕದ ಸಂಪಾದಕ ದಿನೇಶ್ ಅಮಿನ್ ಮಟ್ಟು, ಸಾಹಿತಿ ಮರುಳ ಸಿದ್ದಪ್ಪ, ಸಾಹಿತಿ ದೇವನೂರ ಮಹಾದೇವ, ಕನ್ನಡ ಅಭಿವೃದ್ಧಿ ಪ್ರಾಧಿಕರದ ಮಾಜಿ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ಇತರರು ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ದೇವನೂರ ಮಹಾದೇವ ಅವರು, ವಡ್ಡರ್ಸೆ ರಘರಾಮ ಶೆಟ್ಟರು ಇಂದು ಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದವರು. ಬಂಟರ ಸಮುದಾಯಕ್ಕೆ ಸೇರಿದ ಶೆಟ್ಟರನ್ನು ಇಂದು ಬಂಟರು ನೆನಪಿಸಿಕೊಳ್ತಿಲ್ಲ. ಹಾಗೆಯೇ ತಳ ಸಮುದಾಯದವರು ಸಹ ನೆನಪಿಸಿಕೊಳ್ತಿಲ್ಲ. ಈ ಸಂಕಟಕ್ಕೆ ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದೆ. ಶೆಟ್ಟರ ಆಗಿನ ಮುಂಗಾರು ಪತ್ರಿಕೆಯನ್ನು ನಾನೇ ಬಿಡುಗಡೆ ಮಾಡಿದ್ದೆ. ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಬರಹ ಸಂಕಲನವನ್ನು ಇಂದು ನಾನೇ ಬಿಡುಗಡೆ ಮಾಡಿದ್ದೇನೆಂದರು.
ದೃಶ್ಯ ಮಾಧ್ಯಮ ತನ್ನ ಘನತೆ ತಾನೇ ತುಳಿದಿದೆ : ಶೆಟ್ಟರು ನಾಯಕನೋ ಅಥವಾ ದುರಂತ ನಾಯಕನೋ ಅನ್ನೋ ಪ್ರಶ್ನೆ ಕಾಡುತ್ತೆ. ಯಾಕೆಂದರೆ, ದೊಡ್ಡ ಕನಸ್ಸು ಕಂಡು, ಅದಕ್ಕೊಂದು ಮನೆ ಕಟ್ಟಿ, ಮನೆಯ ಭಾರವನ್ನೂ ಹೊತ್ತು, ಅದು ಕುಸಿಯುತ್ತಿದ್ದರೂ ಛಲ ಬಿಡದಿದ್ದರೂ ನೆಲಕಚ್ಚುತ್ತಲ್ಲ ಇದನ್ನ ನೋಡಿದರೆ ದುರಂತ ನಾಯಕ ಅನ್ನಿಸುತ್ತೆ ಅಂದರು. ಆದರೆ, ಅದೇ ಕ್ಷಣಕ್ಕೆ ಅವ್ರ ಒಡೆತನದ ಸಂಸ್ಥೆ ಕಟ್ಟುತ್ತರಲ್ಲ ಇಂತಹ ಪ್ರಯೋಗ ಈಗಿನ ಪತ್ರಿಕಾ ಮಾಧ್ಯಮದಲ್ಲಿ ಆಗಬೇಕು. ಮಾಧ್ಯಮ ಕ್ಷೇತ್ರ ಅದರಲ್ಲೂ ದೃಶ್ಯ ಮಾಧ್ಯಮ ತನ್ನ ಘನತೆಯನ್ನು ತಾನೇ ತುಳಿದು ನಿಂತಿದೆ. ಇಂತಹ ಸಂದರ್ಭದಲ್ಲಿ ರಘುರಾಮ ಶೆಟ್ಟರು ನೆನಪಾಗುತ್ತಾರೆಂದರು.
ಬೇರೆಯೇ ಮಾತು ಕೈಪಿಡಿಯಾಗಬೇಕು :ಬಳಿಕ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ, ಪ್ರಾದೇಶಿಕ ಭಾಷೆಯ ದಮನಕ್ಕೆ ಪೂರಕವಾಗುವ ರೀತಿಯ ವಾತಾವರಣವಿತ್ತು. ಆದರೂ ಅದಕ್ಕೆ ಹೆದರದೇ ಸಂವಿಧಾನ ಬದ್ಧ ರೀತಿಯಲ್ಲೇ ಸೊಗಸಾಗಿ ಲೇಖನಗಳನ್ನು ಬರೆಯುತ್ತಿದ್ದರು. ಅಮಿತಾ ಷಾ ಅವ್ರಿಗೆ ಇದೊಂದು ಲೇಖನವನ್ನು ತರ್ಜುಮೆ ಮಾಡಿ ಕಳುಸಿದರೆ ಅವರಿಗೆ ತಕ್ಕ ಉತ್ತರ ಕೊಟ್ಟಂತೆ ಆಗುತ್ತದೆಯೆಂದು ಅಂತಾ ಹಿಂದಿ ಹೇರಿಕೆ ಕುರಿತು ತಿರುಗೇಟು ಕೊಟ್ಟರು. ರಘುರಾಮರ ಲೇಖನಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೈಪಿಡಿ ಆಗಬೇಕೆಂದು ತಿಳಿಸಿದರು.